ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಯಾರಾಗಬೇಕು ಎನ್ನುವುದಕ್ಕಿಂತ ಮುಖ್ಯವಾಗಿ ಒಗ್ಗಟ್ಟು ಮೂಡಿಸುವುದು ಮುಖ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿದರು. ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರಾ, ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡುವರೋ ಎನ್ನುವುದು ನಿರ್ಧಾರವಾಗಬೇಕಿದೆ. ಆನಂತರ ಉಭಯ ಪಕ್ಷಗಳ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟು ಪ್ರದರ್ಶಿಸಬೇಕು. ಆನಂತರದಲ್ಲಿ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಬೇಕಿದೆ ಎಂದು ಗುರುವಾರ ಮಂಡ್ಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಕೆ.ಸಿ.ನಾರಾಯಣಗೌಡ ಒತ್ತಾಯಿಸಿರುವ ಬಗ್ಗೆ ಕೇಳಿದಾಗ, ನಾರಾಯಣಗೌಡರು ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಪಕ್ಷ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷ ತೀರ್ಮಾನ ಮಾಡಲಿದೆ ಎಂದರು, ಮೈತ್ರಿ ವಿಚಾರವಾಗಿ ನಾರಾಯಣಗೌಡರು ಅಪಸ್ವರವಿರುವ ಬಗ್ಗೆ ಕೇಳಿದಾಗ, ಅವರ ರಾಜಕೀಯ ಭವಿಷ್ಯಕ್ಕೆ ಧಕ್ಕೆ ಆಗುವ ಪರಿಸ್ಥಿತಿ ಎದುರಾದಾಗ ಸಹಜವಾಗಿಯೇ ಎಲ್ಲರಲ್ಲೂ ಬೇಸರ ಆಗುತ್ತದೆ. ಇದು ರಾಷ್ಟ್ರಮಟ್ಟದಲ್ಲಿ ವರಿಷ್ಠರು ಮಾಡಿರುವ ನಿರ್ಧಾರ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ವರಿಷ್ಠರ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ನಾವೂ ಸಹಕರಿಸಬೇಕು. ಏನೇ ಸಮಸ್ಯೆಗಳು ಎದುರಾದರೂ ಹೇಗೆ ಬಗೆಹರಿಸಿಕೊಳ್ಳಬೇಕೆಂಬ ಬಗ್ಗೆ ಆಲೋಚಿಸಬೇಕು ಎಂದು ಹೇಳಿದರು. ಕೆ.ಸಿ.ನಾರಾಯಣಗೌಡರು ಹಿರಿಯರು. ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದವರು. ಅವರಿಗೆ ಏನೇ ಸಮಸ್ಯೆಗಳಿದ್ದರೂ ಒಟ್ಟಿಗೆ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ. ಅವರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಮೈತ್ರಿಯಿಂದ ಅವರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಪಿ.ರವಿಕುಮಾರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಡಾ.ಇಂದ್ರೇಶ್ ಇತರರಿದ್ದರು.