ಬರಡಾದ ಮೆಣಸಿನ ಗಿಡ: ಅಂಗಡಿಗೆ ಬೀಗ ಜಡಿದು ರೈತರ ಆಕ್ರೋಶ

KannadaprabhaNewsNetwork |  
Published : Apr 28, 2025, 11:45 PM IST
ಬ್ಯಾಡಗಿಯ ವಿನಾಯಕ ಆಗ್ರೋ ಸೆಂಟರ್ ರೈತರು ಬೀಗ ಜಡಿದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಾಗಿನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರಿಗೆ ಪೊಲೀಸರ ಎದುರಿನಲ್ಲಿ ಕಂಪನಿಯ ಉಸ್ತುವಾರಿ ನೌಕರ ಲಿಖಿತವಾಗಿ ಪತ್ರ ಬರೆದು ಕೊಟ್ಟರೂ ಈವರೆಗೂ ಪರಿಹಾರ ಸಿಕ್ಕಿಲ್ಲ.

ಬ್ಯಾಡಗಿ: ಬಿತ್ತನೆ ಮಾಡಿ 4 ತಿಂಗಳು ಗತಿಸಿದರೂ ಗಿಡಗಳಲ್ಲಿ ಮೆಣಸಿನಕಾಯಿ ಬಿಡದ ಹಿನ್ನೆಲೆ ಆಕ್ರೋಶಗೊಂಡ ರೈತರು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಸೋಮವಾರ ಪಟ್ಟಣದ ವಿನಾಯಕ ಆಗ್ರೋ ಸೆಂಟರಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ತಾಲೂಕಿನ ಬಡಮಲ್ಲಿ, ಹಿರೇಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆದ ಮೆಣಸಿನಕಾಯಿ ಗಿಡಗಳಲ್ಲಿ ಕಾಯಿ ಬಿಟ್ಟಿಲ್ಲ. ಇದರಿಂದ ಕಂಗಾಲಾದ ರೈತರು ಬೀಜ ಮಾರಾಟ ಮಾಡಿದ ವಿನಾಯಕ ಆಗ್ರೋ ಸೆಂಟರ್ ಮಾಲೀಕ ಮಂಜುನಾಥ ಬಿದರಿ ಅವರ ಜತೆ ತೀವ್ರ ವಾಗ್ವಾದ ನಡೆಸಿದರು. ಆದರೆ ಬೀಜ ಮಾರಾಟಗಾರರಿಂದ ಯಾವುದೇ ಸಮರ್ಪಕ ಉತ್ತರ ಸಿಗದ ಹಿನ್ನೆಲೆ ಬೀಜದಂಗಡಿಗೆ ಬೀಗ ಜಡಿದು ಪ್ರತಿಭಟಿಸಿದರು.

ಘಟನೆ ಹಿನ್ನೆಲೆ: ತಾಲೂಕಿನ ಹಿರೇಹಳ್ಳಿ ಹಾಗೂ ಬಡಮಲ್ಲಿ ಸೇರಿದಂತೆ ಸುತ್ತಲಿನ ಸುಮಾರು 19 ಜನ ರೈತರು ಕಳೆದ 4 ತಿಂಗಳ ಹಿಂದೆ ಹೈದ್ರಾಬಾದ್ ಮೂಲದ ಡಿಸಿಎಸ್ (ಧಾನ್ಯ ಕ್ರಾಪ್ ಮತ್ತು ಸನ್ಸ್ ಪ್ರೈ.ಲಿ.) ಹೆಸರಿನ ಕಂಪನಿ ಮೆಣಸಿನಕಾಯಿ ಬೀಜಗಳನ್ನು ಬಿತ್ತನೆ ಮಾಡಿದ್ದರು. ಆದರೆ ಬೆಳೆದು ನಿಂತ ಗಿಡಗಳಲ್ಲಿ ಒಂದೂ ಮೆಣಸಿನಕಾಯಿ ಕಾಣಿಸದ ಹಿನ್ನೆಲೆ ಲಕ್ಷಾಂತರ ರು. ಖರ್ಚು ಮಾಡಿದ ರೈತರು ಕಂಗಾಲಾಗಿದ್ದಾರೆ. ಈ ಕುರಿತು ಹಲವು ಬಾರಿ ಕಂಪನಿ ಮ್ಯಾನೇಜರ್ ಹಾಗೂ ಸ್ಥಳೀಯ ವಿನಾಯಕ ಆಗ್ರೋ ಮಾಲೀಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಕಾಗಿನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರಿಗೆ ಪೊಲೀಸರ ಎದುರಿನಲ್ಲಿ ಕಂಪನಿಯ ಉಸ್ತುವಾರಿ ನೌಕರ ಲಿಖಿತವಾಗಿ ಪತ್ರ ಬರೆದು ಕೊಟ್ಟರೂ ಈವರೆಗೂ ಪರಿಹಾರ ಸಿಕ್ಕಿಲ್ಲ.

ಆಗ್ರೋ ಸೆಂಟರ್ ಗೆ ಬೀಗ: ಆಕ್ರೋಶಗೊಂಡ ರೈತರು ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಅಂಗಡಿಗೆ ಬೀಗ ಜಡಿದು ಕಂಪನಿ ಹಾಗೂ ಆಗ್ರೋ ಸೆಂಟರ ವಿರುದ್ಧ ಘೋಷಣೆ ಕೂಗಿದರು. ಅಂಗಡಿ ಮಾಲೀಕ ಮಂಜುನಾಥ ಬಿದರಿ ಮಾತನಾಡಿ, ಕಳಪೆ ಬೀಜದ ಬಗ್ಗೆ ನಾವು ಜವಾಬ್ದಾರರಲ್ಲ. ಕಂಪನಿಯ ಅಧಿಕಾರಿಗಳಿಗೆ ಸಮಸ್ಯೆಯ ಕುರಿತು ಮನವರಿಕೆ ಮಾಡಿದ್ದೇನೆ. ಎರಡು ದಿನಗಳವರೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರತಿಭಟನೆಯಲ್ಲಿ ರೈತರಾದ ನಾಗರಾಜ ಬನ್ನಿಹಳ್ಳಿ, ಮಾರುತಿ ಅಗಸಿಬಾಗಿಲ, ಅಶೋಕಗೌಡ ಹೊಂಡದಗೌಡ್ರ, ಮಲ್ಲೇಶಪ್ಪ ಗೌರಾಪುರ, ಪರಸಪ್ಪ ಪರವತ್ತೇರ, ಯಲ್ಲಪ್ಪ ಓಲೇಕಾರ, ಶಂಕ್ರಣ್ಣ ದೇಸಾಯಿ, ಚಂದ್ರಶೇಖರ ತೋಟದ, ಮಂಜು ಗೌರಾಪುರ, ಶಂಭಣ್ಣ ತಿಳವಳ್ಳಿ, ಪರಮೇಶಪ್ಪ ಮೂಡೇರ, ಮಂಜಪ್ಪ ದಿಡಗೂರು, ಜಯಪ್ಪ ದಿಡಗೂರು, ಚಂದ್ರಪ್ಪ ಶೇಳೂರು, ಕಾಂತೇಶ ಅಗಸೀಬಾಗಿಲ, ಮಾಲತೇಶ ಲಕ್ಕಮ್ಮನವರ, ಪಕ್ಕೀರಪ್ಪ ದಿಡಗೂರು, ಶಿವರುದ್ರಪ್ಪ ಮೂಡೇರ ಇತರರಿದ್ದರು.

₹4 ಲಕ್ಷ ಪರಿಹಾರ ನೀಡಲೇಬೇಕು: ನಾವು 1 ಎಕರೆಗೆ ಮೆಣಸಿನಕಾಯಿ ಬೆಳೆಯಲು ₹1.5 ಲಕ್ಷ ವ್ಯಯಿಸಿದ್ದೇವೆ. ಈಗ ಕ್ವಿಂಟಲ್‌ಗೆ ₹8 ಸಾವಿರ ದರವಿದೆ. ನಾವು ಎಕರೆಗೆ ₹3 ಲಕ್ಷ ಆದಾಯ ಪಡೆಯುತ್ತಿದ್ದು, ಕಳಪೆ ಬೀಜ ಪೂರೈಸಿದ ಆಗ್ರೋ ಮಾಲೀಕರು ಹಾಗೂ ಡಿಸಿಎಸ್ ಕಂಪನಿ ಎಕರೆಗೆ ₹4 ಲಕ್ಷ ಪರಿಹಾರ ನೀಡಲೇಬೇಕು ಎಂದು ನೊಂದ ರೈತ ವೀರೇಶ ದೇಸೂರ ತಿಳಿಸಿದರು.

ಪರಿಹಾರ ವಿತರಿಸಬೇಕು: ಕಳಪೆ ಬೀಜ ಮಾರಾಟ ಮಾಡಿದ್ದಕ್ಕೆ ಪ್ರತಿ ಎಕರೆಗೆ ₹4 ಲಕ್ಷ ಪರಿಹಾರ ನೀಡಬೇಕು. ಇಲ್ಲವೇ ಬೀಜ ಕಂಪನಿ ಹಾಗೂ ಮಾರಾಟಗಾರರ ವಿರುದ್ಧ ಸುಮೋಟೋ ಕ್ರಿಮಿನಿಲ್ ಕೇಸ್ ದಾಖಲಿಸಿಕೊಂಡು ಪರಿಹಾರ ವಿತರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯದರ್ಶಿ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ