-ಬಡದಾಳ- ಅರ್ಜುಣಗಿ ಮಧ್ಯೆ ಪೈಪ್ ತುಂಡಾಗಿರುವ ಸ್ಥಳದಲ್ಲಿರೈತರು ಪಾದಯಾತ್ರೆ ಧರಣಿ
ಕನ್ನಡಪ್ರಭ ವಾರ್ತೆ ಕಲಬುರಗಿ
ಆಫಜಲ್ಪುರ ಹಾಗೂ ಆಳಂದ ಜನತೆಗೆ ವರದಾನವಾಗಬೇಕಿದ್ದ ಕೆರೆ ಕಟ್ಟೆ ತುಂಬಿಸುವ ಭೀಮಾ ಯೋಜನೆಯು ವಿಳಂಬ ಖಂಡಿಸಿ ಹಾಗೂ ಇತ್ತೀಚೆಗೆ ಎನ್‌ಎಚ್‌ಎಐ ಕಾಮಗಾರಿಯಿಂದಾಗಿ ಕೊಳವೆ ತುಂಡಾಗಿ ಉಭಯ ತಾಲೂಕಿನ 13 ಕೆರೆ ತುಂಬಿಸುವ ಯೋಜನೆ ವಿಳಂಬಕ್ಕೆ ಕಾರಣವಾಗಿರುವದನ್ನು ಖಂಡಿಸಿ ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ್ ನೇತೃತ್ವದಲ್ಲಿ ಗುರುವಾರ ಬಡದಾಳ- ಅರ್ಜುಣಗಿ ಮಧ್ಯೆ ಪೈಪ್ ತುಂಡಾಗಿರುವ ಸ್ಥಳದಲ್ಲಿರೈತರು ಪಾದಯಾತ್ರೆ ಧರಣಿ ಆರಂಭಿಸಿದ್ದಾರೆ.ಇದರೊಂದಿಗೆ ಕೆರೆ ತುಂಬಿಸುವ ಯೋಜನೆ ಕುಂಟುತ್ತ ಸಾಗಿರೋದಕ್ಕೆ ಉಗ್ರ ಖಂಡನೆ ಮಾಡುತತ ಉಭಯ ತಾಲೂಕಿನ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕೊಳವೆ ತುಂಡಾಗಿ ಬಿದ್ದು 9 ತಿಂಗಳಾದರೂ ಕೇಳುವವರಿಲ್ಲದಂತಾಗಿದೆ. ಮಳೆ ಕೊರತೆಯಲ್ಲಿ ಭೀಮಾ ಬರಿದಾಗಿದ್ದರಿಂದ ರೈತರು ಕೊಳವೆ ತುಂಡಾದರೂ ಸುಮ್ಮನಿದ್ದರು. ಇದೀಗ ಭೀಮಾ ತುಂಬಿ ತುಳುಕುತ್ತಿರುವುದರಿಂದ ತುಂಡಾದ ಕೊಳವೆ ಮರು ನಿರ್ಮಾಣ, ಕೆರೆಕಟ್ಟೆ ತುಂಬಿಸಲು ನಾವು ಬೀದಿಗೆ ಇಳಿಯುತ್ತಿದ್ದೇವೆ ಎಂದು ಹೋರಾಟದ ನೇತೃತ್ವ ವಹಿಸಿರುವ ಆರ್ ಕೆ ಪಾಟೀಲ್ ಹೇಳಿದ್ದಾರೆ.
ಸಿದ್ದರಾಮ ಪ್ಯಾಟಿ, ಶಿವಪುತ್ರಪ್ಪ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸವಪ್ಪ ಪಾಟೀಲ್, ಗುರುಲಿಂಗಮ್ಮ ಜಂಗಮ ಪಾಟೀಲ್, ಬಸವರಾಜ ಉಪ್ಪೀನ್, ಚನ್ನಬಸಪ್ಪ ಪಾಟೀಲ್ ಸೇರಿದಂತೆ ಆಳಂದ, ಅಫಜಲ್ಪುರ ತಾಲೂಕಿನ ನೂರಾರು ರೈತರು ಪಾಲ್ಗೊಂಡಿದ್ದರು.