ಎಸ್.ಜಿ. ತೆಗ್ಗಿನಮನಿ
ನರಗುಂದ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ದರ ಕ್ವಿಂಟಲ್‌ಗೆ 1600- 1700ಕ್ಕೆ ಕುಸಿತ ಕಂಡ ಹಿನ್ನೆಲೆ ಖರೀದಿ ಕೇಂದ್ರಕ್ಕಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಮಾಡಲಾಗಿತ್ತು.
ಲಕ್ಷ್ಮೇಶ್ವರದಲ್ಲಿ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹವನ್ನೂ ಕೈಗೊಳ್ಳಲಾಗಿತ್ತು. ರೈತರ ಹೋರಾಟಕ್ಕೆ ಮಣಿದಿದ್ದ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸೂಚಿಸಿ ರೈತರ ನೋಂದಣಿ ಪ್ರಕ್ರಿಯೆಯನ್ನು ನರಗುಂದದಲ್ಲಿ ಡಿ. 3ರಿಂದ ಆರಂಭಿಸಿತ್ತು. ಇದರಿಂದ ರೈತರು ಸಂತಸಗೊಂಡಿದ್ದರು. ಆದರೆ ಈ ಸಂತಸ ಬಹಳ ದಿನ ಉಳಿಯಲಿಲ್ಲ. ಈ ಖರೀದಿ ಕೇಂದ್ರದಲ್ಲಿ ನೋಂದಣಿಯಾದ 18 ರೈತರ 652 ಕ್ವಿಂಟಲ್ ಮೆಕ್ಕೆಜೋಳವನ್ನು ಇಲ್ಲಿಯವರೆಗೆ ಖರೀದಿಸಲಾಗಿದೆ. ಉಳಿದ ಸಾವಿರಾರು ರೈತರ ಮೆಕ್ಕೆಜೋಳ ಖರೀದಿ ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ.ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿಗಾಗಿ ಕೇವಲ 197 ರೈತರ ನೋಂದಣಿ ಮಾಡಲಾಗಿದೆ. ಬಳಿಕ ಸರ್ವರ್ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆ ಮುಂದಿಟ್ಟು ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ನೋಂದಣಿ ಮಾಡಲು ಹೋದ ರೈತರಿಗೆ ಸರ್ವರ್ ಸಮಸ್ಯೆ ಎಂದು ಹೇಳಿ ಹಿಂದಿರುಗಿಸಲಾಗುತ್ತಿದೆ. ಇದರಿಂದ ಮೆಕ್ಕೆಜೋಳ ಯಾಕಾದರೂ ಬೆಳೆದಿದ್ದೇವೆ ಎಂದು ರೈತರೇ ಹಿಡಿಶಾಪ ಹಾಕುತ್ತಿದ್ದಾರೆ.
ಸರ್ಕಾರ ಮಾತ್ರ ಖರೀದಿ ಕೇಂದ್ರ ಪ್ರಾರಂಭಿಸಿದ್ದೇವೆ ಎಂದು ಹೇಳುತ್ತಾ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂಬ ಆರೋಪ ರೈತ ವಲಯದಿಂದಲೇ ಕೇಳಿಬರುತ್ತಿದೆ.ತಾಲೂಕಿನಲ್ಲಿ ಈ ವರ್ಷ ಒಟ್ಟು ಖುಷ್ಕಿ ಮತ್ತು ನೀರಾವರಿ ಜಮೀನುಗಳಲ್ಲಿ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆ ಮಾಡಲಾಗಿತ್ತು. ಪ್ರತಿ ಎಕರೆಗೆ ಸರಾಸರಿ 25 ಕ್ವಿಂಟಲ್ ಇಳುವರಿ ಬಂದಿದೆ. ಈ ಬಾರಿ ತಾಲೂಕಿನಲ್ಲೇ 4 ಲಕ್ಷ ಕ್ವಿಂಟಲ್ ಗೋವಿನಜೋಳ ಉತ್ಪಾದನೆಯಾಗಿದೆ ಎಂಬ ಅಂದಾಜಿದೆ. ಬೆಳೆದ ಮೆಕ್ಕೆಜೋಳ ಮಾರಾಟ ಮಾಡಲು ಪರದಾಡುವ ಸ್ಥಿತಿ ಬಂದಿದೆ ಎಂದು ರೈತರು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶೀಘ್ರ ಖರೀದಿ: ಸರ್ಕಾರದ ಆದೇಶ ಪ್ರಕಾರ ತಾಲೂಕಿನಲ್ಲಿ ಗೋವಿನ ಜೋಳ ಖರೀದಿ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ಈವರೆಗೆ ಒಟ್ಟು 197 ರೈತರು ಹೆಸರು ನೋಂದಣಿಯಾಗಿವೆ. ಸರ್ವರ್ ಸಮಸ್ಯೆಯಿಂದ ನೋಂದಣಿಗೆ ಹಿನ್ನಡೆಯಾಗಿದೆ. ನೋಂದಣಿಯಾದ ಎಲ್ಲ ರೈತರ ಮೆಕ್ಕೆಜೋಳವನ್ನು ಶೀಘ್ರ ಖರೀದಿ ಮಾಡಲಾಗುವುದು ಎಂದು ಸಹಕಾರಿ ಮಾರಾಟ ಮಹಾಮಂಡಳಿ ತಾಲೂಕು ವ್ಯವಸ್ಥಾಪಕ ಸಚಿನ ಪಾಟೀಲ ತಿಳಿಸಿದರು.