‘ಕಲ್ಪವೃಕ್ಷ’ ಕೀಟಬಾಧೆ ಮಾಹಿತಿಗೆ ಮುಗಿಬಿದ್ದ ರೈತರು!

KannadaprabhaNewsNetwork |  
Published : Nov 16, 2025, 02:00 AM IST
Daangi | Kannada Prabha

ಸಾರಾಂಶ

ನುಸಿ ಪೀಡೆ, ಕಪ್ಪು ತಲೆ ಹುಳು ಬಾಧೆಯಿಂದ ತತ್ತರಿಸಿರುವ ರಾಜ್ಯದ ಹಲವು ಜಿಲ್ಲೆಗಳ ಅನ್ನದಾತರು, ಕೀಟ ಹತೋಟಿಯ ಬಗ್ಗೆ ‘ಕೃಷಿ ಮೇಳ’ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಪಡೆಯುತ್ತಿದ್ದುದು ಕಂಡುಬಂತು.

ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ನುಸಿ ಪೀಡೆ, ಕಪ್ಪು ತಲೆ ಹುಳು ಬಾಧೆಯಿಂದ ತತ್ತರಿಸಿರುವ ರಾಜ್ಯದ ಹಲವು ಜಿಲ್ಲೆಗಳ ಅನ್ನದಾತರು, ಕೀಟ ಹತೋಟಿಯ ಬಗ್ಗೆ ‘ಕೃಷಿ ಮೇಳ’ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಪಡೆಯುತ್ತಿದ್ದುದು ಕಂಡುಬಂತು.

ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೆಂಗಿನ ಮರಗಳಿಗೆ ನುಸಿ ಪೀಡೆ ಬಾಧಿಸುತ್ತಿದೆ. ಕಪ್ಪು ತಲೆ ಹುಳು(ಬ್ಲ್ಯಾಕ್‌ ಹೆಡ್ಡೆಡ್‌ ಕ್ಯಾಟ್‌ ಪಿಲ್ಲರ್‌)ವಿನ ಹಾವಳಿಯೂ ಕಡಿಮೆಯೇನಿಲ್ಲ. ಇದರಿಂದಾಗಿ ತೆಂಗಿನ ಮರಗಳು ಸೊರಗುತ್ತಿದ್ದು ಇಳುವರಿಗೆ ಭಾರೀ ಹೊಡೆತ ಬಿದ್ದಿದೆ. ಪರಿಣಾಮವಾಗಿ ಎಳನೀರು, ತೆಂಗಿನ ಕಾಯಿ, ಕೊಬ್ಬರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಸಂಕಷ್ಟ ಪರಿಸ್ಥಿತಿಯಲ್ಲಿರುವ ತೆಂಗು ರೈತರು, ಬೆಂಗಳೂರು ಕೃಷಿ ವಿವಿಯು ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ರೋಗ ನಿವಾರಣೆಗೆ ಉಚಿತ ಸಲಹೆ ನೀಡುತ್ತಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಪಡೆದರು. ಕರ್ನಾಟಕ, ತಮಿಳುನಾಡು, ಆಂಧ್ರ, ಗುಜರಾತ್‌, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕಾರ್ಯಕ್ಷೇತ್ರ ಹೊಂದಿರುವ ‘ಪ್ಯಾರಾಚೂಟ್‌ ಕಲ್ಪವೃಕ್ಷ ಫೌಂಡೇಷನ್‌’ ಸ್ವಯಂಸೇವಾ ಸಂಸ್ಥೆ(ಎನ್‌ಜಿಒ)ಯು ಉಚಿತವಾಗಿ ಮಾಹಿತಿ ನೀಡಿದ್ದು ಗಮನ ಸೆಳೆಯಿತು.

ಖುದ್ದು ಭೇಟಿ ನೀಡಿ ಸಲಹೆ

ತೆಂಗಿನಲ್ಲಿ ಉಂಟಾಗುವ ರೋಗ, ಕೀಟ ಮತ್ತು ಪೋಷಕಾಂಶದ ಸಮಸ್ಯೆಗಳಿಗೆ ನಾವು ಉಚಿತ ಪರಿಹಾರ ನೀಡುತ್ತೇವೆ. ರೈತರು ಟೋಲ್‌ ಫ್ರೀ ಸಂಖ್ಯೆ 1800 266 4646 ಸಂಪರ್ಕಿಸಿದರೆ ನಾವು ರೈತರ ತೋಟಗಳಿಗೇ ಭೇಟಿ ನೀಡಿ ಉಚಿತವಾಗಿ ಸಲಹೆ ನೀಡಲಾಗುವುದು. ರೈತರ ಸೇವೆಯಲ್ಲಿ ತೊಡಗಿಕೊಳ್ಳಲು ಉತ್ಸುಕರಾಗಿರುವ ಸಾವಿರಾರು ಪ್ರತಿನಿಧಿಗಳು ನಮ್ಮ ಬಳಗದಲ್ಲಿದ್ದಾರೆ. ಇವರು ಖುದ್ದು ಭೇಟಿ ನೀಡಿ ರೈತರಿಗೆ ನೆರವಾಗಲಿದ್ದಾರೆ ಎಂದು ಸಂಸ್ಥೆಯ ಟೀಂ ಲೀಡರ್‌ ಕಿರಣ್‌ ಸ್ಪಷ್ಟಪಡಿಸುತ್ತಾರೆ.

ಸಸ್ಯ ತಳಿ ಸಂಕ್ಷಣೆಗೆ ಸಹಕಾರ

ನಿಮ್ಮಲ್ಲಿ ಯಾವುದಾದರೂ ಅಪರೂಪದ ಸಸ್ಯ ತಳಿ ಇದೆಯೇ. ಅದನ್ನು ಸಂರಕ್ಷಿಸಬೇಕು ಎಂದು ನಿರ್ಧರಿಸಿದ್ದೀರಾ. ಹಾಗಾದರೆ ಇಲ್ಲಿ ನಿಮಗೆ ಅಗತ್ಯ ಸಹಕಾರ ಸಿಗಲಿದೆ. ಕೇಂದ್ರ ಸರ್ಕಾರದ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು ಈ ನಿಟ್ಟಿನಲ್ಲಿ ರೈತರಿಗೆ ನೆರವು ನೀಡಲಿದೆ. ಶಿವಮೊಗ್ಗದ ಕೃಷಿ ವಿವಿ ಆವರಣದಲ್ಲಿ ವಿಭಾಗೀಯ ಕಚೇರಿ ಹೊಂದಿರುವ ಪ್ರಾಧಿಕಾರವು ಕೃಷಿ ಮೇಳದಲ್ಲಿ ಈ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಿತು. ಇಲ್ಲಿಯವರೆಗೂ 8970 ತಳಿಗಳ ಸಂರಕ್ಷಣೆಗೆ ಪ್ರಮಾಣಪತ್ರ ನೀಡಲಾಗಿದೆ ಎನ್ನುತ್ತಾರೆ ಪ್ರಾಧಿಕಾರದ ಕೆ.ಜೆ.ಮೇಘನಾ.ಸುವಾಸಿತ ಹಾಲು ನೀಡುವ ‘ಡಾಂಗಿ’

ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಡಾಂಗಿ ಜನಾಂಗದವರು ಸಂರಕ್ಷಿಸಿರುವ ‘ಡಾಂಗಿ’ ತಳಿಯ ಹಸು ಕೃಷಿ ಮೇಳದಲ್ಲಿ ಗಮನಸೆಳೆಯಿತು. 500 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ತಳಿ ಇದಾಗಿದೆ.

‘ಡಾಂಗಿ ತಳಿಯು ಮಳೆ, ಚಳಿ, ಗಾಳಿ, ಬಿಸಿಲು ಸೇರಿದಂತೆ ಎಂತಹ ಪ್ರತೀಕೂಲ ಹವಾಮಾನಕ್ಕೂ ಜಗ್ಗುವುದಿಲ್ಲ. ಅನಾರೋಗ್ಯಕ್ಕೂ ಒಳಗಾಗುವುದಿಲ್ಲ. ಮೃದುವಾದ ಚರ್ಮವನ್ನು ಹೊಂದಿದ್ದು ಮುಟ್ಟಿದರೆ ಮೇಣವನ್ನು ಸ್ಪರ್ಶಿಸಿದಂತಿರುತ್ತದೆ. ಇಷ್ಟೊಂದು ಸುವಾಸನೆಭರಿತ ಹಾಲನ್ನು ಬೇರೆ ಯಾವ ತಳಿಯೂ ನೀಡುವುದಿಲ್ಲ. ದಿನಕ್ಕೆ 6 ರಿಂದ 8 ಲೀಟರ್‌ ಹಾಲು ಕರೆಯಬಹುದು. ಕೊಬ್ಬಿನಂಶವೂ ಅಧಿಕವಾಗಿರುತ್ತದೆ. ವ್ಯವಸಾಯ ಮತ್ತು ಹೈನುಗಾರಿಕೆಗೂ ಸೂಕ್ತವಾಗಿದೆ. ಒಂದಕ್ಕೆ 1.5 ಲಕ್ಷ ರುಪಾಯಿ ಎಂದು ಬೇಗೂರಿನ ಶ್ರೀ ಕೃಷ್ಣ ಗೋಶಾಲೆಯ ಸಿ.ಎನ್‌.ಕೃಷ್ಣಮೂರ್ತಿ ವಿವರಿಸಿದರು.

PREV

Recommended Stories

ನರೇಗಾ ಯೋಜನೆ ಕೂಲಿಕಾರರಿಗೆ ವರದಾನ
ಗೃಹಲಕ್ಷ್ಮೀ ಹಣದಲ್ಲಿ ಕಾನಹಳ್ಳಿ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ