ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ತಾವರಗೇರಾದಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು, ಯುವಕರು ಹಾಗೂ ಪ್ರಗತಿಪರ ಹೋರಾಟಗಾರರು ಸೋಮವಾರ ಪಾದಯಾತ್ರೆ ಆರಂಭಿಸಿದರು.
ಕುಷ್ಟಗಿ: ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ತಾವರಗೇರಾದಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು, ಯುವಕರು ಹಾಗೂ ಪ್ರಗತಿಪರ ಹೋರಾಟಗಾರರು ಸೋಮವಾರ ಪಾದಯಾತ್ರೆ ಆರಂಭಿಸಿದರು.
ತಾಲೂಕಿನ ತಾವರಗೇರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ನೂರಾರು ರೈತರು, ಯುವಕರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ತಾವರಗೇರಾದಿಂದ ಆರಂಭವಾದ ಪಾದಯಾತ್ರೆ ನವಲಹಳ್ಳಿ, ಹಿರೇಮನ್ನಾಪುರ, ಕುಷ್ಟಗಿ, ಬೇವೂರು, ಇರಕಲಗಡ ಮಾರ್ಗವಾಗಿ ಕೊಪ್ಪಳ ತಲುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಿದೆ.
ಅಭಿನವ ಕರಿಬಸವ ಶ್ರೀಗಳು, ಮಹೇಶ್ವರಸ್ವಾಮಿ ಹಿರೇಮಠ, ಸಿದ್ಧಾರೂಢ ಶ್ರೀಗಳು, ಚಂದ್ರಶೇಖರ ನಾಲತವಾಡ, ಬಸವರಾಜ ಹಳ್ಳೂರು, ದೊಡ್ಡಬಸವನಗೌಡ ಪಾಟೀಲ ಬಯ್ಯಾಪುರ ಇದ್ದರು.ಅಗತ್ಯ ನೆರವು ನೀಡಿ: ಕುಷ್ಟಗಿ ತಾಲೂಕಿನ ರೈತರ ಕಷ್ಟವನ್ನು ಸರ್ಕಾರ ಅರಿತುಕೊಳ್ಳಬೇಕು. ಮಳೆ ಕೊರತೆ ಹಾಗೂ ಬೆಳೆಹಾನಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಬದುಕನ್ನು ಗಮನದಲ್ಲಿಟ್ಟುಕೊಂಡು ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಅಗತ್ಯ ನೆರವು ನೀಡಬೇಕು ಎಂದು ನಿಡಶೇಸಿ ಮಠದ ಅಭಿನವ ಕರಿಬಸವ ಶ್ರೀಗಳು ಹೇಳಿದರು.
ಕುಷ್ಟಗಿಯನ್ನು ಬರಪೀಡಿತ ತಾಲೂಕು ಘೋಷಣೆಗೆ ಮನವಿ
ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ಶಾಸಕ ದೊಡ್ಡನಗೌಡ ಪಾಟೀಲ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕಂದಾಯ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಶಾಸಕ ದೊಡ್ಡನಗೌಡ ಪಾಟೀಲ್ ಅವರು, ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಲಾಗಿದ್ದು, ಇದೀಗ ಮೂರನೇ ಬಾರಿ ಸೂಕ್ತ ದಾಖಲೆಗಳು ಹಾಗೂ ಬರ ಪರಿಸ್ಥಿತಿಯ ವಾಸ್ತವಾಂಶಗಳೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.ತಾಲೂಕಿನಲ್ಲಿ ಮಳೆ ಕೊರತೆ, ಬೆಳೆ ಹಾನಿ ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ರೈತರ ಹಿತದೃಷ್ಟಿಯಿಂದ ಕುಷ್ಟಗಿಯನ್ನು ಶೀಘ್ರವಾಗಿ ಬರಪೀಡಿತ ಎಂದು ಘೋಷಿಸಿ, ಅಗತ್ಯ ಪರಿಹಾರ ಹಾಗೂ ನೆರವು ಒದಗಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕುಷ್ಟಗಿಯ ಬರ ಪರಿಸ್ಥಿತಿ ಮನಗಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕಂದಾಯ ಇಲಾಖೆ ಸಚಿವ ಡಾ. ಜಿ. ಪರಮೇಶ್ವರ ಶೀಘ್ರದಲ್ಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.