ಚರಂಡಿ ಗಲೀಜು ನೀರಿನಲ್ಲೇ ಹಣ್ಣು ವ್ಯಾಪಾರ!

KannadaprabhaNewsNetwork |  
Published : Sep 22, 2026, 02:30 AM IST
21ುಲು1,2 | Kannada Prabha

ಸಾರಾಂಶ

ಗಂಗಾವತಿ ನಗರದ ಬಸ್ ನಿಲ್ದಾಣದ ಬಳಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು, ಹಣ್ಣು ಮಾರಾಟಗಾರರು ಗಲೀಜು ನೀರಿನ ಮೇಲೆ ಕುಳಿತೆ ವ್ಯಾಪಾರ ನಡೆಸುವಂತಾಗಿದೆ. ನಗರದ ಬಸ್ ನಿಲ್ದಾಣ ಮುಂಭಾಗದಲ್ಲಿ ಚರಂಡಿ ತುಂಬಿ ಹರಿಯುತ್ತಿದ್ದರೂ ನಗರಸಭೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಮಮೂರ್ತಿ ನವಲಿ

ಗಂಗಾವತಿ: ನಗರದ ಬಸ್ ನಿಲ್ದಾಣದ ಬಳಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು, ಹಣ್ಣು ಮಾರಾಟಗಾರರು ಗಲೀಜು ನೀರಿನ ಮೇಲೆ ಕುಳಿತೇ ವ್ಯಾಪಾರ ನಡೆಸುವಂತಾಗಿದೆ. ನಗರದ ಬಸ್ ನಿಲ್ದಾಣ ಮುಂಭಾಗದಲ್ಲಿ ಚರಂಡಿ ತುಂಬಿ ಹರಿಯುತ್ತಿದ್ದರೂ ನಗರಸಭೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಜನನಿಬಿಡ ಈ ಸ್ಥಳದಲ್ಲಿ ಹಣ್ಣುಗಳ ಮಾರಾಟ ನಡೆಯುತ್ತದೆ. ಹತ್ತಿರದಲ್ಲೇ ಹೊಟೆಲ್‌ಗಳು ಮತ್ತು ನೆಹರು ಉದ್ಯಾನ ಇದೆ. ಗ್ರಾಮೀಣ ಪ್ರದೇಶದಿಂದ ಬರುವ ಜನರು ಕೆಲಸಮಯ ಉದ್ಯಾನದಲ್ಲಿ ವಿಶ್ರಾಂತಿ ಪಡೆಯುವುದು ಮಾಮೂಲು. ಆದರೆ ಚರಂಡಿಯ ಗಬ್ಬುನೀರಿನ ವಾಸನೆಗೆ ಹಿಡಿಶಾಪ ಹಾಕುವಂತಾಗಿದೆ.

ಅವೈಜ್ಞಾನಿಕ ಚರಂಡಿ ನಿರ್ಮಾಣ: ಗಂಗಾವತಿ ನಗರದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿರುವುದೇ ನೀರು ಸರಾಗವಾಗಿ ಹೋಗದಿರಲು ಕಾರಣ. ನಗರೋತ್ಥಾನ, ಅಮೃತ ಸಿಟಿ ಯೋಜನೆಯಲ್ಲಿ ಕೋಟ್ಯಂತರ ರುಪಾಯಿ ಕಾಮಗಾರಿ ನಡೆದಿದ್ದರೂ ಗುಣಮಟ್ಟಕ್ಕೆ ಆದ್ಯತೆ ನೀಡದಿರುವುದು ಈ ಅವ್ಯವ್ಯಸ್ಥೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತದೆ.

ಅಲ್ಲದೆ ನಗರಸಭೆಯವರಿಗೆ ಸಂಘ-ಸಂಸ್ಥೆಗಳ ವಿರೋಧ ಇದ್ದರೂ ಉದ್ಯಾನದ ಪಕ್ಕದಲ್ಲಿ ಶೌಚಾಲಯ ನಿರ್ಮಿಸಿದ್ದು, ಇದು ಇಕ್ಕಟ್ಟಿನ ಸ್ಥಳ ಮತ್ತು ಚರಂಡಿ ನೀರು ಹೋಗದೆ ಇರುವುದಕ್ಕೆ ಉದಾಹರಣೆಯಾಗಿದೆ. ಇದೇ ಸ್ಥಳದಲ್ಲಿ ಕುಡಿಯುವ ನೀರಿನ ಪೂರೈಕೆಯ ನೆಟ್‌ವಾಲ್ ಇದ್ದು, ಇದರಲ್ಲಿಯೇ ನೀರು ಸಂಗ್ರಹವಾಗಿದೆ.

ಚರಂಡಿ ನೀರಿನ ಮೇಲೆ ಕುಳಿತು ಹಣ್ಣು ಮಾರಾಟ: ಬಸ್ ನಿಲ್ದಾಣದ ಮುಂಭಾಗ ಮತ್ತು ಸರ್ಕಾರಿ ಜ್ಯೂನಿಯರ್ ಕಾಲೇಜು ದ್ವಾರ ಬಳಿ ಚರಂಡಿ ನೀರು ರಸ್ತೆ ಮೇಲೆ ನಿಂತಿದೆ. ಅಲ್ಲಿಯೇ ಹಣ್ಣು ಮಾರಾಟ ನಡೆಯುತ್ತಿದೆ. ಜನರು ಗಲೀಜು ನೀರಿನಲ್ಲಿ ಹೋಗಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವ್ಯಾಪಾರ ಕುಂಠಿತವಾಗಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ಇನ್ನೊಂದೆಡೆ ಬೀದಿ ಬದಿಯ ಬಂಡಿಯಲ್ಲಿ ತಿಂಡಿ-ತಿನಿಸು ವ್ಯಾಪಾರ ನಡೆಯುತ್ತದೆ.

ಸಂಚಾರಕ್ಕೆ ಅಡ್ಡಿ: ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ವಾಹನಗಳ ಸಂಚಾರ ಮಾಡುವವರ ಗೋಳು ಯಾರೂ ಕೇಳದಂತಾಗಿದೆ. ಒಂದು ಕಡೆ ಚರಂಡಿ ನೀರು, ಇನ್ನೊಂದು ಕಡೆ ರಸ್ತೆಯ ಮೇಲೆ ತೆಗ್ಗು-ದಿನ್ನೆಗಳಿಂದ ಬೇಸತ್ತ ವಾಹನಗಳ ಸವಾರರು ನಗರಸಭೆ ಇದೆಯೋ ಇಲ್ಲವೋ ಎಂದು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರಸಭೆಯವರು ಮತ್ತು ಜಿಲ್ಲಾಧಿಕಾರಿ ಇತ್ತ ಕಡೆ ಗಮನಹರಿಸಿದರೆ ಸ್ವಚ್ಛತಾ ಆಂದೋಲನಕ್ಕೆ ಅರ್ಥ ಬಂದಂತಾಗುತ್ತದೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

ಚರಂಡಿ ತುಂಬಿ ನೀರು ರಸ್ತೆ ಮೇಲೆ ಬಂದಿವೆ. ಗಲೀಜು ನೀರಿನ ಮಧ್ಯೆ ಹಣ್ಣು ವ್ಯಾಪಾರ ಮಾಡಬೇಕಾಗಿದೆ. ಹಣ್ಣು ಖರೀದಿಗೆ ಯಾರೂ ಬರುತ್ತಿಲ್ಲ. ಶೌಚಾಲಯ ಮತ್ತು ಚರಂಡಿ ನೀರು ಇದ್ದಿದ್ದರಿಂದ ವ್ಯಾಪಾರ ಕುಂಠಿತವಾಗಿದೆ ಎಂದು ಹಣ್ಣು ವ್ಯಾಪಾರಿಗಳು ಹೇಳುತ್ತಾರೆ.ಚರಂಡಿಯಲ್ಲಿ ಕಸ ಕಡ್ಡಿ ಸಿಕ್ಕಿ ಹಾಕಿಕೊಂಡಿದ್ದರಿಂದ ನೀರು ಸರಳವಾಗಿ ಹೋಗುತ್ತಿಲ್ಲ. ಟ್ಯಾಂಕ್‌ನ ನೀರು ಮತ್ತು ಚರಂಡಿ ನೀರು ಹೆಚ್ಚಿನ ಮಟ್ಟದಲ್ಲಿ ಬಂದಿದ್ದರಿಂದ ಚರಂಡಿ ತುಂಬಿ ರಸ್ತೆಗೆ ಹರಿದಿವೆ. ಕಸವನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ನಗರಸಭೆ ಪರಿಸರ ಅಭಿಯಂತರ ಶರಣಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌಲ್ಯಯುತ ಶಿಕ್ಷಣದ ಅನುಷ್ಠಾನ ಬಹಳ ಮುಖ್ಯ: ಮುಪ್ಪಿನ ಬಸವಲಿಂಗ ಶ್ರೀ
ದಲಿತ ಕುಟುಂಬದ ಮನೆ ಧ್ವಂಸಗೊಳಿಸಿದ ಆರೋಪಿಗಳ ಬಂಧಿಸಲು ಆಗ್ರಹ