ಕುಮಟಾ: ಜನರಿಗೆ ತೊಂದರೆ ಕೊಡಲು ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹೊಸದೊಂದು ಅಸ್ತ್ರವನ್ನು ಅಧಿಕಾರಿಗಳ ಕೈಗೆ ಕೊಡಲಾಗಿದೆ. ಆಡಳಿತದಲ್ಲಿ ಯಾವುದೇ ಬದಲಾವಣೆ ಕಾಣದೇ ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟ ಮುಂದುವರಿದಿದೆ. ಇಂಥ ಕಾಂಗ್ರೆಸ್ ಸರ್ಕಾರವನ್ನು ಕಿತ್ತು, ಮುಂದೆ ಬಿಜೆಪಿ ಸರ್ಕಾರವನ್ನು ತಂದಾದರೂ ಈ ಆದೇಶವನ್ನು ಹಿಂಪಡೆಯುತ್ತೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಆ. ೧೩ಕ್ಕೆ ಆದೇಶ ಮಾಡಿ, ಅರಣ್ಯ ಬೆಟ್ಟ, ಸರ್ಕಾರಿ ಭೂಮಿ, ಗ್ರಾಮಠಾಣಾ ಮುಂತಾದ ಜಾಗದ ನಿವಾಸಿಗಳ ಕಟ್ಟಡ ತೆರಿಗೆ ಆಕರಿಸದಂತೆ ಸೂಚಿಸಿದ್ದು, ಅವರೆಲ್ಲರ ಮನೆ ನಂಬರ್ ರದ್ದಾಗಲಿದೆ. ದಿವಗಿ ಪಂಚಾಯಿತಿಯೊಂದರಲ್ಲೇ ಮುಕ್ಕಾಲು ಭಾಗ ಜನರ ಮನೆ ನಂಬರ್ ರದ್ದಾಗಲಿದೆ.
ಸರ್ಕಾರದ ಮಾತು ಕೇಳಿ ಪಿಡಿಒಗಳು ಜನಕ್ಕೆ ನೋಟಿಸ್ ಕೊಡಬಾರದು ಎಂದು ಎಚ್ಚರಿಕೆ ನೀಡುತ್ತೇನೆ. ಇದರ ವಿರುದ್ಧ ಸೆ. ೨೫ರ ವರೆಗೆ ಜಿಲ್ಲಾದ್ಯಂತ ಪ್ರತಿ ಪಂಚಾಯಿತಿಗಳಲ್ಲಿ ಜನಾಗ್ರಹ ಆಂದೋಲನ ನಡೆಯಲಿದೆ ಎಂದರು. ಸರ್ಕಾರ ಈ ಆದೇಶವನ್ನು ಹಿಂಪಡೆಯಲೇಬೇಕು ಎಂದು ಆಗ್ರಹಿಸಿದರು.ಅರಣ್ಯ, ಪರಿಸರ, ನದಿಗಳು ಉಳಿಯಬೇಕೆಂಬುದಕ್ಕೆ ನಮ್ಮೆಲ್ಲರ ಒಪ್ಪಿಗೆಯಿದೆ. ಹಸಿರು ಕಂಡಲ್ಲೆಲ್ಲಾ ಅರಣ್ಯವೆಂದು ನಮೂದಿಸಲಾಗಿದೆ. ಅಲ್ಲಿ ಏನೂ ಮಾಡದಂತೆ ವರದಿಯಲ್ಲಿ ನಿರ್ಬಂಧಿಸಿದ್ದಾರೆ. ಕಸ್ತೂರಿರಂಗನ್ ವರದಿ ಕೇವಲ ಉಪಗ್ರಹ ಆಧರಿತವಾಗಿದ್ದರಿಂದ ಸಮರ್ಪಕವಾಗಿಲ್ಲವೆಂದು ವಿರೋಧಿಸುತ್ತಿದ್ದೇವೆ. ಈ ವರದಿಯಿಂದ ಜನಜೀವನ ತೊಂದರೆಗೀಡಾಗಲಿದೆ. ಊರಿಗೆ ಬಂದು ಸರ್ವೆ ನಂಬರ್ ಪ್ರಕಾರ ಮಾಲ್ಕಿ, ಗದ್ದೆ, ತೋಟ ಮುಂತಾದವನ್ನು ಪ್ರತ್ಯೇಕಿಸಿ ದಾಖಲಿಸಬೇಕು.
ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯ, ಬೆಟ್ಟ, ಗ್ರಾಮಠಾಣಾ, ಸರ್ಕಾರಿ ಭೂಮಿ ಮುಂತಾದ ಸ್ಥಳಗಳಲ್ಲಿರುವ ಕಟ್ಟಡಗಳ ಆಸ್ತಿ ತೆರಿಗೆ ಸ್ವೀಕಾರಕ್ಕೆ ಸಂಬಂಧಿಸಿದ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಹಿಂಪಡೆಯಬೇಕು. ಈ ಹಿನ್ನೆಲೆ ನಮ್ಮ ಮನೆ ನಮ್ಮ ಹಕ್ಕು ಎಂದು ಜನಾಗ್ರಹ ಅಭಿಯಾನವನ್ನು ಬಿಜೆಪಿಯಿಂದ ಸಂಸದ ಕಾಗೇರಿಯವರ ಮುಂದಾಳತ್ವದಲ್ಲಿ ಇಂದಿನಿಂದ ಜಿಲ್ಲಾದ್ಯಂತ ಆರಂಭಿಸಲಾಗಿದೆ ಎಂದರು.