ಬರಪೀಡಿತ ಕುಷ್ಟಗಿ ತಾಲೂಕು ಘೋಷಣೆಗೆ ರೈತರ ಪಾದಯಾತ್ರೆ

KannadaprabhaNewsNetwork |  
Published : Sep 11, 2026, 02:30 AM IST
ಕುಷ್ಟಗಿ ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯಕ್ಕೆ ಕರ್ನಾಟಕ ರೈತ ಪ್ರಾಂತ ಸಂಘದ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ಪಾದಯಾತ್ರೆಯಲ್ಲಿ ಆಗಮಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಬರದ ಛಾಯೆಯಲ್ಲಿ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದರೂ ಕುಷ್ಟಗಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದನ್ನು ಖಂಡಿಸಿ ಕರ್ನಾಟಕ ರೈತ ಪ್ರಾಂತ ಸಂಘದ ನೇತೃತ್ವದಲ್ಲಿ ರೈತರು ಕುಷ್ಟಗಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಗುರುವಾರ ಪಾದಯಾತ್ರೆಯಲ್ಲಿ ಆಗಮಿಸಿದರು.

ಕುಷ್ಟಗಿ: ಬರದ ಛಾಯೆಯಲ್ಲಿ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದರೂ ಕುಷ್ಟಗಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದನ್ನು ಖಂಡಿಸಿ ಕರ್ನಾಟಕ ರೈತ ಪ್ರಾಂತ ಸಂಘದ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ಬುಧವಾರದಿಂದ ಪಾದಯಾತ್ರೆ ನಡೆಸಿ ಗುರುವಾರ ಕುಷ್ಟಗಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಚಳಗೇರ, ತಳುವಗೇರಾ, ನೀಡಸೇಸಿ, ಶಾಖಾಪುರ, ಯಲಬುರ್ತಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಕೈಯಲ್ಲಿ ಬೇಡಿಕೆಗಳ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ‘ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ಗುಳೆ ತಡೆಯಿರಿ, ಉದ್ಯೋಗ ಕೊಡ್ರಿ, ಕೆರೆ ತುಂಬಿಸಿ, ಜೀವಸಂಕುಲ ಉಳಿಸಿ ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷೆ ಸಂಗಮ್ಮ ಗುಳಗೌಡ್ರು ಮಾತನಾಡಿ, ರೈತ ಕುಟುಂಬಗಳು ಮಕ್ಕಳ ಶಿಕ್ಷಣ ಹಾಗೂ ಊಟಕ್ಕೂ ಹಣವಿಲ್ಲದೆ ಸಂಕಷ್ಟದಲ್ಲಿವೆ. ಹಲವು ಕುಟುಂಬಗಳು ಬೀದಿಗೆ ಬರುವಂತಾಗಿದೆ. ಗಂಗಾವತಿ, ಕಾರಟಗಿ ಭಾಗದಲ್ಲಿ ನೀರಾವರಿ ಸೌಲಭ್ಯವಿದ್ದರೂ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಕುಷ್ಟಗಿಯನ್ನು ಕೈಬಿಟ್ಟಿರುವುದು ಯಾವ ಮಾನದಂಡ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸಮೀಕ್ಷೆ ನಡೆಸದೆ ರೈತರ ಹೊಲಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರ ಪರಿಸ್ಥಿತಿಯನ್ನು ಅರಿತಿರುವ ರೈತರ ಮಕ್ಕಳನ್ನೇ ಸಮೀಕ್ಷೆಗೆ ಕಳುಹಿಸಿದರೆ ನೈಜ ಚಿತ್ರಣ ಸಿಗಲಿದೆ ಎಂದರು.

ಸಂಘದ ಮುಖಂಡ ಆರ್.ಕೆ. ದೇಸಾಯಿ ಮಾತನಾಡಿ, ನೀರಾವರಿ ಪ್ರದೇಶಗಳನ್ನೂ ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಆದರೆ ಬರದ ಹೊಡೆತಕ್ಕೆ ಸಿಲುಕಿರುವ ಕುಷ್ಟಗಿಯನ್ನು ಕಡೆಗಣಿಸಲಾಗುತ್ತಿದೆ. ರೈತರ ವಿಚಾರದಲ್ಲಿ ಸರ್ಕಾರಕ್ಕೆ ನಿರ್ಲಕ್ಷ್ಯ ಧೋರಣೆ ಇದೆ ಎಂದು ಆರೋಪಿಸಿದರು.

ರೈತ ಮುಖಂಡ ಶರಣಪ್ಪ ಬಾಚಲಾಪುರ ಮಾತನಾಡಿ, ತಾಲೂಕಿನಲ್ಲಿ ನಾಲ್ವರು ಹಾಲಿ–ಮಾಜಿ ಶಾಸಕರು ಇದ್ದರೂ ರೈತರ ಪರವಾಗಿ ಯಾರೂ ಪರಿಣಾಮಕಾರಿ ಧ್ವನಿ ಎತ್ತುತ್ತಿಲ್ಲ. ₹498 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದರೂ ಕೆರೆಗಳು ತುಂಬಿಲ್ಲ. ಅಧಿಕಾರಿಗಳು ವೈಜ್ಞಾನಿಕವಾಗಿ ಬರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ರೈತ ಶೇಷರಾವ್ ಮಾತನಾಡಿ, ಬರಗಾಲ ಸಮೀಕ್ಷೆ ಕುರಿತು ಅಧಿಕಾರಿಗಳು ಅವೈಜ್ಞಾನಿಕ ವರದಿ ಸಲ್ಲಿಸಿದ್ದಾರೆ. ಹೊಲದ ವಾಸ್ತವ ಪರಿಸ್ಥಿತಿ ಪರಿಗಣಿಸದೆ ವರದಿ ಸಿದ್ಧಪಡಿಸಲಾಗುತ್ತಿದ್ದು, ಇದರಲ್ಲಿ ರಾಜಕೀಯ ಹುನ್ನಾರವಿದೆ ಎಂಬ ಅನುಮಾನವಿದೆ ಎಂದು ಆರೋಪಿಸಿದರು.

ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆ ಕುಂಠಿತವಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸವೂ ಕಡಿಮೆಯಾಗಿದ್ದು, ಕುಟುಂಬಗಳು ಉದ್ಯೋಗ ಅರಸಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರಪೀಡಿತ ತಾಲೂಕು ಎಂದು ಘೋಷಿಸದಿರುವುದರಿಂದ ಬರ ಪರಿಹಾರ ಹಾಗೂ ಸರ್ಕಾರದ ಇತರ ನೆರವುಗಳಿಂದ ರೈತರು ವಂಚಿತರಾಗುವ ಆತಂಕವಿದೆ ಎಂದು ರೈತರು ಹೇಳಿದರು.

ಅಧಿಕಾರಿಗಳಿಗೆ ತರಾಟೆ: ಬರಗಾಲ ಸಮೀಕ್ಷೆ ಕುರಿತು ರೈತರು ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ನಮ್ಮ ಹೊಲಗಳಿಗೆ ಬಂದು ನೋಡಿ; ಕಚೇರಿಯಲ್ಲಿ ಕುಳಿತು ಬರದ ಪ್ರಮಾಣ ನಿರ್ಧರಿಸಬೇಡಿ’ ಎಂದು ಒತ್ತಾಯಿಸಿ, ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ಮಳೆ ಮಾಪನ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸುವ ಭರವಸೆ ಇದೆ, ರೈತರು ಆತಂಕ ಪಡಬೇಡಿ ಎಂದು ಹೇಳಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ 45,437 ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ನಿಯಮಾನುಸಾರ ಬೆಳೆ ಆಯ್ಕೆ ಮಾಡಿ ಯಾವುದೇ ಮೋಸವಾಗದಂತೆ ಶೇಕಡಾವಾರು ಪರಿಹಾರ ನೀಡಲಾಗುವುದು. ರೈತರು ಆತಂಕಪಡಬಾರದು ಎಂದರು.

ರೈತ ಸಂಘಟನೆಯ ಪ್ರಮುಖರಾದ ಬಸವರಾಜ ಗಾಣಿಗೇರ, ಮಲ್ಲಿಕಾರ್ಜುನ ಅಡವಿಭಾವಿ, ಅಕ್ಕಮ್ಮ ಮರೇಗೌಡ್ರ, ಮಲ್ಲಿಕಾರ್ಜುನಗೌಡ, ಹನಮೇಶ ಶಾಖಾಪುರ, ದೇವರಾಜ ಹಜಾಳದ, ಕಾಶೀಂ ಶ್ರೀಶಾಲ, ಅಮರೇಗೌಡ ಪೊಲೀಸ್‌ಪಾಟೀಲ್‌, ಯಮನೂರಪ್ಪ ಹನುಮಸಾಗರ ಆಗಮಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

80 ಡೆಸಿಬಲ್‌ ಮೀರಿದರೆ ಡಿಜೆ ಬಾಕ್ಸ್‌ ವಶ, ಪ್ರಕರಣ ದಾಖಲು
ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್‌ ಪೂಜಾರಿ ದ.ಕ. ಕಾಂಗ್ರೆಸ್‌ ಅಧ್ಯಕ್ಷ