ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಪಂ ಸಾಮಾನ್ಯ ಸಭೆ ನಡೆಯಿತು. ಸಭೆ ಆರಂಭಕ್ಕೂ ಮುನ್ನಾ ಹಿಂದಿನ ಸಭೆಯ ನಡಾವಳಿಗಳ ಗೊತ್ತುವಳಿ ತಿಳಿಸಿ ಎಂದು ಪಪಂ ಸದಸ್ಯರು ಆಗ್ರಹಿಸಿದರು.
ಕುಕನೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಪಂ ಸಾಮಾನ್ಯ ಸಭೆ ನಡೆಯಿತು.ಸಭೆ ಆರಂಭಕ್ಕೂ ಮುನ್ನಾ ಹಿಂದಿನ ಸಭೆಯ ನಡಾವಳಿಗಳ ಗೊತ್ತುವಳಿ ತಿಳಿಸಿ ಎಂದು ಪಪಂ ಸದಸ್ಯರು ಆಗ್ರಹಿಸಿದರು.
ಸದಸ್ಯರಾದ ಮಲ್ಲಿಕಾರ್ಜುನ ಚೌದ್ರಿ, ಬಾಲರಾಜ ಗಾಳಿ, ಸಿದ್ಲಿಂಗಯ್ಯ ಉಳ್ಳಾಗಡ್ಡಿ ಅವರು, ನಮಗೆ ಹಿಂದಿನ ಸಭೆಯಲ್ಲಿ ನಿರ್ಣಯಿಸಿದ ವಿಷಯಗಳು ಯಾವ ಹಂತಕ್ಕೆ ಕಾರ್ಯರೂಪಕ್ಕೆ ಬಂದಿವೆ. ಅವುಗಳ ಸ್ಥಿತಿ-ಗತಿ ಏನು ಎಂದು ತಿಳಿಸಿ, ಈ ಸಭೆ ವಿಷಯ ಚರ್ಚಿಸಿ ಎಂದು ಬಿಗಿ ಪಟ್ಟುಹಿಡಿದರು. ಹಿಂದಿನ ಸಭೆಯ ನಡಾವಳಿಗಳ ಕಾರ್ಯದ ಬಗ್ಗೆಯೇ ವಿಸ್ತೃತವಾದ ಚರ್ಚೆಯೇ ಜರುಗಿತು. ಕೆಲವು ವಿಷಯಗಳು ಬರೀ ಠರಾವಾಗಿ ಕಾಗದಲ್ಲಿಯೇ ಉಳಿದಿದ್ದು, ಇನ್ನೂ ಕೆಲವು ಜಾರಿಗೆ ಬರಲು ಅಧಿಕಾರಿಗಳು ನಿರಾಸಕ್ತಿ ತೋರಿದ್ದು, ಕೆಲವೊಂದು ಕಾರ್ಯ ರೂಪಕ್ಕೆ ಬಂದರೂ ಸದಸ್ಯರಿಗೆ ತಿಳಿಯದೇ ಇದ್ದದ್ದೂ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಸಭೆಯ ಮೊದಲೇ ಪಾಯಿಂಟ್ ಹಿಂದಿನ ಸಭಾ ಠರಾವುಗಳಿಗೆ ಈ ಸಭೆಯಲ್ಲೂ ಸಹ ಒಮ್ಮತದ ಠರಾವು ವ್ಯಕ್ತವಾಗಲೇ ಇಲ್ಲ.
ಪಟ್ಟಣದ ಕೆಲವು ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಾಮನಿರ್ದೇಶಿತ ಸದಸ್ಯ ರಫಿ ಹಿರೇಹಾಳ ಮಾತನಾಡಿ, ನನ್ನದೆ ನಿವೇಶನದ ಹಕ್ಕನ್ನು ಸರಿಯಾಗಿ ನಮೂದಿಸದೇ ಪಪಂ ಸಿಬ್ಬಂದಿ ನಿರ್ಲಕ್ಷ್ಯವಹಿಸಿ ಕಾನೂನುಬಾಹಿರ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಕೂಲಂಕಷ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ನಾಗೇಶ ಉತ್ತರಿಸಿದರು.
ನಮ್ ಮನೆ ಮುಂದಿನ ಕಂಬಕ್ಕೆ ಲೈಟ್ ಇಲ್ಲಾರೀ, ವಾರ್ಡಿನ ಚರಂಡಿ ತುಂಬಿವೆ. ಸ್ವಚ್ಛ ಇಲ್ಲ. ಇಲ್ಲಿ ನೋಡ್ರಿ ಎಂದು ಪಪಂ ಸದಸ್ಯೆ ಲಕ್ಷ್ಮೀ ವಿರೇಶ ಸಬರದ ಮೊಬೈಲ್ ಫೋಟೋಗಳನ್ನು ಮುಖ್ಯಾಧಿಕಾರಿಗೆ ತೋರಿಸಿದರು. ಇದಕ್ಕೆ ಉತ್ತರಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ ಕರಮುಡಿ, ಪಪಂ ಪೌರಕಾರ್ಮಿಕರು ಪ್ರತಿ ಎರಡು ದಿನಗಳಿಗೊಮ್ಮೆ ಎಲ್ಲ ವಾರ್ಡ್‌ಗಳ ಚರಂಡಿ ಸ್ವಚ್ಛಮಾಡಬೇಕು ಎಂದು ತಿಳಿಸಲಾಗಿದೆ. ಯಾಕೆ ಸ್ವಚ್ಛತೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಅಮೃತ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಿಯಮದಂತೆ ಆಗುತ್ತಿಲ್ಲ ಎಂದು ಪಪಂ ಸದಸ್ಯ ಸಿದ್ದು ಉಳ್ಳಾಗಡ್ಡಿ ದೂರಿದರು. ಪರಿಶೀಲಿಸಿ ಪಪಂಗೆ ವರದಿ ನೀಡಲು ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ್ ಅವರು ಅಧಿಕಾರಿಗೆ ಸೂಚಿಸಿದರು.
ವಾರ್ಡ್ ಸ್ವಚ್ಛತೆಗೆ ಬಾರದ ಪೌರಕಾರ್ಮಿಕರಿಗೆ ಸಂಬಳ ನೀಡಬೇಡಿ ಎಂದು ಪಪಂ ಸದಸ್ಯ ಗುದ್ನೇಪ್ಪ ನೋಟಗಾರ ಹೇಳಿದರು. ಶೌಚಾಲಯ ಸ್ವಚ್ಛಗೊಳಿಸುವ ಸಿಬ್ಬಂದಿಗೆ ಶೀಘ್ರ ಸಂಬಳ ನೀಡಿ ಎಂದು ಒತ್ತಾಯಿಸಿದರು.
ನಂತರ ನಾನಾ ವಾರ್ಡುಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಪಪಂ ಸದಸ್ಯ ಬಾಲರಾಜ ಗಾಳಿ ಪಪಂ ಕಾರ್ಯಾಲಯದ ಪಪಂ ಸಿಬ್ಬಂದಿ ಕೊರತೆ ನೀಗಿಸಿ ಎಂದರು. ಬಸ್ ನಿಲ್ದಾಣದ ಮುಂದಿರುವ ಅಪೂರ್ಣವಾಗಿರುವ ಪಪಂ ಮಳಿಗೆಗಳಿಗೆ ಅನುದಾನವನ್ನು ಪಪಂ ಕಾರ್ಯಾಲಯದಿಂದ ನೀಡಬೇಕು ಎಂದು ಸದಸ್ಯ ಸಿದ್ದು ಉಳ್ಳಾಗಡ್ಡಿ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.