ದಾಬಸ್‍ಪೇಟೆ: ನೆಲಮಂಗಲ ತಾಲೂಕಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗಿದ್ದು, ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ತಿಂಗಳಿನಿಂದ ಆಗಾಗ ಬರುತ್ತಿರುವ ಮಳೆಯಿಂದಾಗಿ ಜಮೀನು ಹದವಾಗಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಇತ್ತೀಚೆಗಿನ ಸಾಧಾರಣ ಮಳೆಗೆ ರೈತರು ತಮ್ಮ ಜಮೀನುಗಳನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸಿ ಹಸನುಗೊಳಿಸಿಕೊಂಡಿದ್ದರು. ಈಚೆಗೆ ಸುರಿದ ಮಳೆಗೆ ರೈತರು ಬಿತ್ತನೆ ಮಾಡುವ ತಯಾರಿ ನಡೆಸಿದ್ದಾರೆ.
ತಾಲೂಕಿನಲ್ಲಿ ಮಳೆಯೂ ಬಿತ್ತನೆಗಾಗಿ ಹದವಾಗಿ ಸುರಿಯುತ್ತಿದ್ದು, ಇದೀಗ ಮಳೆ ಬಿಡುವು ಕೊಟ್ಟಿರುವುದರಿಂದ ಭೂಮಿ ಹದ ಮಾಡುವ ಕೆಲಸದಲ್ಲಿ ರೈತರು ತೊಡಗಿದ್ದಾರೆ. ಜುಲೈ ಕೊನೆಯ ವಾರದಿಂದ ಆರಂಭಗೊಂಡಿರುವ ರಾಗಿ ಬಿತ್ತನೆ ಕಾರ್ಯ, ಆಗಸ್ಟ್ ತಿಂಗಳ ಕೊನೆಯವರೆಗೂ ನಡೆಯಲಿದೆ.
21731 ಹೆಕ್ಟೇರ್ ಗುರಿ:ಕೃಷಿ ಇಲಾಖೆಯೂ ಮಳೆಯಾಶ್ರಿತ 21701 ಹೆಕ್ಟೇರ್, ನೀರಾವರಿ 30 ಹೆಕ್ಟೇರ್ ಸೇರಿ ಒಟ್ಟು 21731 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಿದ್ದು, ಈಗಾಗಲೇ ರಾಗಿಯನ್ನು 1467 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.
ರಾಗಿ ಹೊರತುಪಡಿಸಿ ಏಕದಳ ಧಾನ್ಯಗಳಾದ ಭತ್ತ 75 ಹೆಕ್ಟೇರ್, ಮುಸುಕಿನ ಜೋಳ 1185 ಹೆಕ್ಟೇರ್ ಸೇರಿ 1260 ಹೆಕ್ಟೇರ್ ದೇಶದಲ್ಲಿ ದ್ವಿದಳ ಧಾನ್ಯಗಳಾದ ತೊಗರಿ 400 ಹೆಕ್ಟೇರ್, ಅಲಸಂದೆ 44 ಹೆಕ್ಟೇರ್ ಅವರೆ 434 ಹೆಕ್ಟೇರ್ ಒಟ್ಟು 878 ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿಯಿದ್ದು ಈಗಾಗಲೇ ತೊಗರಿಯನ್ನು 158 ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿದೆ. ಎಣ್ಣೆ ಕಾಳುಗಳಾದ ಹರಳು 52 ಹೆಕ್ಟೇರ್, ಸಾಸಿವೆ 32 ಹೆಕ್ಟೇರ್, ಹುಚ್ಚೇಳು 16 ಹೆಕ್ಟೇರ್ ನೆಲಗಡಲೆ 30 ಹೆಕ್ಟೇರ್, ಒಟ್ಟು ಸೇರಿ 130 ಹೆಕ್ಟೇರ್ ಗುರಿ ಹೊಂದಲಾಗಿದೆ. ನವಣೆಯನ್ನು 3 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯಲ್ಲಿ ಈಗಾಗಲೇ 2 ಹೆಕ್ಟೇರ್‌ನಲ್ಲಿ ಬಿತ್ತಲಾಗಿದೆ. ಸಾವೆಯನ್ನು 3 ಹೆಕ್ಟೇರ್‌ನಲ್ಲಿ ಬಿತ್ತುವ ಗುರಿ ಹೊಂದಲಾಗಿದೆ.
ಅಧಿಕ ಇಳುವರಿ ಕೊಡುವ ಹಾಗೂ ಗುಣಮಟ್ಟದ ರಾಗಿ ಬಿತ್ತನೆ ಬೀಜ ಕೃಷಿ ಇಲಾಖೆಯಲ್ಲಿ ಲಭ್ಯವಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಎಂ.ಆರ್-6, ಜಿ.ಪಿ.ಯು-28 , ಎಂ.ಎಲ್.365 ರಾಗಿಯ ತಳಿಗಳು ದಾಸ್ತಾನಿದ್ದು, ರಿಯಾಯಿತಿ ದರದಲ್ಲಿ ಎಲ್ಲ ರೈತರಿಗೂ ಲಭ್ಯವಿದೆ. ರಾಷ್ಟ್ರೀಯ ಬೀಜ ನಿಗಮ ಹಾಗೂ ರಾಜ್ಯ ಬೀಜ ನಿಗಮಗಳಿಂದ ಬಿತ್ತನೆ ಬೀಜ ಪೂರೈಕೆಯಾಗುತ್ತಿದ್ದು, ರಸಗೊಬ್ಬರಕ್ಕೂ ಕೊರತೆಯಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಸೋಂಪುರ, ತ್ಯಾಮಗೊಂಡ್ಲು, ಸೋಲೂರು ಹಾಗೂ ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲೂ ರಾಗಿ ಬಿತ್ತನೆ ಬೀಜಗಳು ದಾಸ್ತಾನು ಮಾಡಲಾಗಿದೆ. ರಾಗಿ ಜೊತೆಗೆ ಮುಸುಕಿನ ಜೋಳ, ಅಲಸಂದೆ, ತೊಗರಿ ಬೀಜಗಳೂ ಲಭ್ಯವಾಗಿವೆ. ರಸಗೊಬ್ಬರಗಳು ಖಾಸಗಿಯ ಅಧಿಕೃತ ಮಾರಾಟಗಾರರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಭ್ಯವಿದ್ದು ರೈತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆ ಇದ್ದು ಒರಿಯಂಟಲ್ ಜನರಲ್ ಇನ್ಸುರೆನ್ಸ್ ಕಂಪನಿ ಮೂಲಕ ಹೋಬಳಿ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ವಿಮೆ ಕಂತು ಪಾವತಿಸಬೇಕು. ಒಂದು ಎಕರೆಗೆ 399.2 ಕಂತನ್ನು ಆಗಸ್ಟ್ 14 ರೊಳಗೆ ಪಾವತಿಸಿ ವಿಮೆ ಮಾಡಿಸುವಂತೆ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ರೈತರಿಗೆ ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಬಿತ್ತನೆ ಬೀಜ ಮತ್ತು ಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪಡೆಯಬಹುದು. ಮುಂಗಾರು ಬೆಳೆಯ ಬಗ್ಗೆ ರೈತರಿಗೆ ಅಗತ್ಯ ಮಾಹಿತಿಯನ್ನು ಕೃಷಿ ಇಲಾಖೆಯಿಂದ ನೀಡಲಾಗುವುದು.
ಸಹಾಯಕ ಕೃಷಿ ನಿರ್ದೇಶಕರು,
ನೆಲಮಂಗಲ ತಾಲೂಕುಪೋಟೋ 4 :
ನೆಲಮಂಗಲ ತಾಲೂಕಿನ ಕೆಲವು ಕಡೆ ಬಿತ್ತನೆ ಮಾಡಿರುವ ರಾಗಿ ಬೆಳೆ.