ಹೆಣ್ಮಕ್ಕಳು ತಮ್ಮ ಭದ್ರತೆಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜತೆಗೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್. ಇಂದುಮತಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹೆಣ್ಮಕ್ಕಳು ತಮ್ಮ ಭದ್ರತೆಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜತೆಗೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್. ಇಂದುಮತಿ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ ಪ್ರಥಮ ವರ್ಷದ ಯುಜಿ ಹಾಗೂ ಪಿಜಿ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿದ್ದ ಪುತ್ರಿಯರ ದಿನ–ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾನತೆ ಸಾಧಿಸಲು ಶಿಕ್ಷಣದ ಜತೆಗೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿರುವ ಪ್ರತಿಭೆಯೇ ಅವರನ್ನು ಮುನ್ನಡೆಸುವ ಪ್ರಮುಖ ಶಕ್ತಿಯಾಗಿದೆ. ತಮ್ಮತನವನ್ನು ಉಳಿಸಿಕೊಂಡು ದೇಶದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ಪರಿಸರ ಹಾಗೂ ಪ್ರಕೃತಿಯ ಸಂರಕ್ಷಣೆಯ ಜವಾಬ್ದಾರಿಯನ್ನೂ ಅರಿತುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಸ್ಥಾನಮಾನ ಗಳಿಸಿಕೊಂಡಿದ್ದಾರೆ. ಕುಟುಂಬದ ಪ್ರೋತ್ಸಾಹ ಹಾಗೂ ಶಿಕ್ಷಕರ ಆಶೀರ್ವಾದದಿಂದ ವಿಶ್ವವಿದ್ಯಾಲಯದ ಹೆಬ್ಬಾಗಿಲಿಗೆ ತಲುಪಿರುವ ವಿದ್ಯಾರ್ಥಿನಿಯರಿಗೆ ತಮ್ಮ ಪ್ರತಿಭೆಯನ್ನು ಅರಳಿಸಿಕೊಳ್ಳಲು ವಿಶ್ವವಿದ್ಯಾಲಯ ಹಲವು ಅವಕಾಶ ಒದಗಿಸುತ್ತಿದೆ. ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ತಮ್ಮದೇ ಆದ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿನಿಯರು ನಿಮ್ಮ ಪ್ರತಿಭೆಗಳಿಂದ ವಿವಿಧ ಕ್ಷೇತ್ರಗಳಲ್ಲಿ ಹೊರಹೊಮ್ಮಬೇಕು. ಕಾಲ ಬದಲಾಗುತ್ತಿರುವಂತೆ ಶಿಕ್ಷಣದ ಸ್ವರೂಪವೂ ಬದಲಾಗುತ್ತಿದೆ. ಆದ್ದರಿಂದ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ವಿದ್ಯಾರ್ಥಿನಿಯರಲ್ಲಿ ದಯೆ, ಜ್ಞಾನ ಹಾಗೂ ನಡೆ-ನುಡಿಯಲ್ಲಿ ನೈತಿಕತೆ ಇರಬೇಕು ಎಂದು ಹೇಳಿದರು.

ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ವಿಜಯಕುಮಾರ ಅಜೂರ ಮಾತನಾಡಿ, ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಶೈಕ್ಷಣಿಕ ಹಾಗೂ ಇತರ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಆರ್ಥಿಕ, ಶೈಕ್ಷಣಿಕ ಸೇರಿದಂತೆ ಜೀವನದ ಎಲ್ಲ ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ವಿದ್ಯಾರ್ಥಿನಿಯರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ವರ್ಷದ ಯುಜಿ ಹಾಗೂ ಪಿಜಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಜ್ಯೋತಿ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಸ್ನಾತಕ ಕೋರ್ಸುಗಳ ವಿಶೇಷ ಅಧಿಕಾರಿ ಪ್ರೊ. ಡಿ.ಎಂ.ಮದರಿ ವಂದಿಸಿದರು. ದಾನೇಶ್ವರಿ ನಿರೂಪಿಸಿದರು.