ಚಿಕ್ಕಮಗಳೂರುರೈತರ ಬಗರ್ ಹುಕುಂ ಸಾಗುವಳಿ ಚೀಟಿ ರದ್ದಿಗೆ ಸಂಬಂಧಿಸಿದಂತೆ ಶಾಸಕರು, ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹಾರ ಮಾಡಿದರೆ ಕಾನೂನು ಸಮರ ನಡೆಸುವ ಅಗತ್ಯವೇ ಇರುವುದಿಲ್ಲ ಎಂದು ಹಿರಿಯ ವಕೀಲ ಎಂ.ಶಿವಪ್ರಸಾದ್ ಹೇಳಿದರು.
ರೈತರ ಬಗರ್ ಹುಕುಂ ಸಾಗುವಳಿ ಚೀಟಿ ರದ್ದಿಗೆ ಸಂಬಂಧಿಸಿದಂತೆ ಶಾಸಕರು, ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹಾರ ಮಾಡಿದರೆ ಕಾನೂನು ಸಮರ ನಡೆಸುವ ಅಗತ್ಯವೇ ಇರುವುದಿಲ್ಲ ಎಂದು ಹಿರಿಯ ವಕೀಲ ಎಂ.ಶಿವಪ್ರಸಾದ್ ಹೇಳಿದರು.
ಶನಿವಾರ ಪಟ್ಟಣದ ರೈತ ಭವನದಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ರದ್ದು ವಿರೋಧಿಸಿ ಹಮ್ಮಿಕೊಂಡಿದ್ದ ‘ರೈತರ ಬೃಹತ್ ಸಮಾವೇಶ’ದಲ್ಲಿ ಮಾತನಾಡಿ ರೈತರ ವಿರೋಧ ಕಟ್ಟಿಕೊಂಡು, ರೈತ ವಿರೋಧ ಕಾನೂನು ತರುವ ಸರ್ಕಾರಗಳು ಚರಿತ್ರೆಯಲ್ಲೇ ಉಳಿದಿಲ್ಲ ಎಂದರು.
ಕಂದಾಯ ಕಾರ್ಯದರ್ಶಿ ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾದ ರೈತರ ಭೂಮಿ ಬಗ್ಗೆ 3 ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ತನಿಖಾ ತಂಡವನ್ನು ನೇಮಿಸಲಾಗಿತ್ತು. ಅದರ ವರದಿಯನ್ನು ಜಿಲ್ಲಾಧಿಕಾರಿಸರ್ಕಾರಕ್ಕೆ ಕಳಿಸಬೇಕಿತ್ತು. ನಂತರ ಆ ವರದಿ ಆಧಾರದ ಮೇರೆಗೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕು. ಆದರೆ ಅಧಿಕಾರಿಗಳು ಏಕಾಏಕಿ ಅರ್ಜಿ ವಜಾ ಮಾಡಿರುವುದು ತಪ್ಪು ಎಂದು ಹೇಳಿದರು.
ಇದರಿಂದ ಕೇವಲ 10-15 ಗುಂಟೆ ಜಮೀನು ಇರುವ ದಲಿತರ, ಅಲ್ಪಸಂಖ್ಯಾತರ, ಹಿಂದುಳಿತ ವರ್ಗದ ಸಣ್ಣ ರೈತರಿಗೆ ತೊಂದರೆಯಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಮಧ್ಯ ಪ್ರವೇಶಿಸಿ, ರೈತರ ಸಮಸ್ಯೆ ಬಗೆಹರಿಸಿದ್ದರೆ ಕಾನೂನು ಸಮರ ನಡೆಸುವ ಅಗತ್ಯವೇ ಇಲ್ಲ ಎಂದು ಹೇಳಿದರು.
ಹಿರಿಯ ವಕೀಲ ಎಚ್.ಎಂ.ಪ್ರಸಾದ್ ಮಾತನಾಡಿ, ಅಕ್ರಮವನ್ನು ಸಕ್ರಮ ಮಾಡಿದ್ದು, ಸಕ್ರಮವನ್ನು ಅಕ್ರಮವೆಂದು ಹೇಳುತ್ತಿರುವುದು. ತನಿಖೆ ಮಾಡಿರುವುದು, ನಂತರ ಅರ್ಜಿ ವಜಾ ಮಾಡಿರುವುದು ಸರ್ಕಾರದ ಅಧಿಕಾರಿಗಳೇ ಆದ ಮೇಲೆ ಇಲ್ಲಿ ರೈತರ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ತಪ್ಪಿನಿಂದ ರೈತರು ಬೀದಿಗೆ ಬರುವ ಸ್ಥಿತಇದೆ. ಸರ್ಕಾರ ಮಾಡಿದ ತಪ್ಪನ್ನು ಈಗ ಸರ್ಕಾರವೇ ಬಗೆಹರಿಸಿದ್ದರೆ ರೈತರು ನ್ಯಾಯಾಲಯದವರೆಗೆ ಬರುವ ಅವಶ್ಯಕತೆ ಇರಲಿಲ್ಲ. ರೈತರಿಗೆ ತೊಂದರೆ ಕೊಡುವ ಜನಪ್ರತಿನಿಧಿಗಳು ಮತ್ತೆ ಜೀವನದಲ್ಲಿ ಜನಪ್ರತಿನಿಧಿಗಳಾಗಲು ಅವಕಾಶ ಕೊಡಬಾರದೆಂದು ಹೇಳಿದರು. ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ಯಿಂದ ಸಾವಿರಾರು ರೈತರಿಗೆ ಪುನರ್‌ಜೀವನ ಸಿಕ್ಕಿದೆ. ಆದರೆ, ಇದು ತಾತ್ಕಾಲಿಕ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ರೈತರ ನೆರವಿಗೆ ಬರಬೇಕು. ಅದಕ್ಕಾಗಿ ಬಿ.ಎಲ್.ಶಂಕರ್ ನಮ್ಮ ಹಕ್ಕೊತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಬೇಕು. ಜತೆಗೆ ರೈತರ ನಿಯೋಗ ಕರೆದೊಯ್ದು ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು. ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ ಮಲೆನಾಡು ಭಾಗದ ರೈತರಿಗೆ ಹೋರಾಟದ ಮನಸ್ಥಿತಿ ಬಂದಿರುವುದು ಉತ್ತಮ ಬೆಳವಣಿಗೆ. ತಾನು ಸರ್ಕಾರದ ಯಾವುದೇ ಹುದ್ದೆಯಲ್ಲಿಲ್ಲ, ಆದರೂ ತಾನು ಕೂಡ ಓರ್ವ ರೈತ. ರೈತರ ಹೋರಾಟಕ್ಕೆ ಬೆಂಬಲ ನೀಡುವುದು ತನ್ನ ಕರ್ತವ್ಯ. ತಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಂತರ ನಿಯೋಗ ಕರೆದೊಯ್ದು ಸಮಸ್ಯೆ ಬಗೆಹರಿಸಲು ಶ್ರಮಿಸುತ್ತೇನೆಂದು ಹೇಳಿದರು. ಕಾಂಗ್ರೆಸ್ ಮುಖಂಡ ದೇವರಾಜ್ ಮಾತನಾಡಿ ಕಾಡು ಪ್ರಾಣಿಗಳಿಂದ ಕಂಗೆಟ್ಟಿದ್ದ ರೈತರು, ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕಾರಿಗಳ ತಪ್ಪಿನಿಂದ ರೈತರು ಭೂಮಿ ಕಳೆದುಕೊಂಡು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಆಂತಕದ ಸ್ಥಿತಿ ಉಂಟಾಗಿದೆ ಎಂದರು.
ಸಮಾವೇಶದಲ್ಲಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಯಿತು. ಬಳಿಕ ವೇದಿಕೆ ಮುಖಂಡರು ಬಿ.ಎಲ್.ಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಸಮಾವೇಶಕ್ಕೆ ಬಂದಿದ್ದ ಸಾವಿರಾರು ರೈತರು ವಕಾಲತ್ತು ಅರ್ಜಿಯನ್ನು ಹಿರಿಯ ವಕೀಲ ಎಂ. ಶಿವಪ್ರಸಾಧ್, ಎಚ್.ಎಂ.ಪ್ರಸಾದ್‌ಗೆ ನೀಡಿದರು.
ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಹ್ಯಾರಗುಡ್ಡೆ, ಉಪಾಧ್ಯಕ್ಷರಾದ ಗಬ್ಬಳ್ಳಿ ಚಂದ್ರೇ ಗೌಡ, ಬಂಕೇನಹಳ್ಳಿ ಸುರೇಶ್, ಕಾರ್ಯದರ್ಶಿ ನವೀನ್ ಮರೆಬೈಲ್, ಎಂ.ಕೆ.ರವಿ ಮಗ್ಗಲಮಕ್ಕಿ, ಮಂಜಪ್ಪಯ್ಯ ಕಳಸ, ರಾಧಾ ಸುಂದ್ರೇಶ್, ಎಚ್.ಎಚ್.ದೇವರಾಜ್, ಬಿ.ಎಸ್.ಜಯರಾಂಗೌಡ, ಅಬ್ದುಲ್ ರೆಹಮಾನ್ ಮೊದಲಾದವರಿದ್ದರು.
----
ಪೋಟೊ ೨೩ಮೂಡಿಗೆರೆ೧ಸಿ:
ಮೂಡಿಗೆರೆ ರೈತಭವನದಲ್ಲಿ ನಡೆದ ರೈತರ ಬೃಹತ್ ರೈತ ಸಮಾವೇಶವನ್ನು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಉದ್ಘಾಟಿಸಿದರು. ಮಾಜಿ ಶಾಸಕ ವೈಎಸ್‌ವಿ ದತ್ತ , ಹಿರಿಯ ವಕೀಲ ಎಂ.ಶಿವಪ್ರಸಾದ್ , ಎಚ್.ಎಂ.ಪ್ರಸಾದ್, ಕಾಂಗ್ರೆಸ್ ಮುಖಂಡ ದೇವರಾಜ್ ಮೊದಲಾದವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.