ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ , ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ ಅಂಗವಾಗಿ “ ಕೃಷಿ ಯಾನ- ಕೃಷಿ ಪ್ರವಾಸೋದ್ಯಮ ಕೇಂದ್ರ” ಹಾಗೂ “ ಸಹ್ಯಾದ್ರಿ ಆಹಾರೋತ್ಪನ್ನಗಳ ಮಾರಾಟ ಮಳಿಗೆ " ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಹಿತದೃಷ್ಟಿಯಿಂದ ಕೃಷಿ ವಿಶ್ವವಿದ್ಯಾಲಯವು ಹೊಸ ಉತ್ಪನ್ನಗಳನ್ನು ತಯಾರು ಮಾಡಲು ಅನೇಕ ಸೌಲಭ್ಯಗಳು ಹಾಗೂ ಸಹಕಾರವನ್ನು ನೀಡುತ್ತಿದ್ದು, ರೈತರು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ವರ್ತಮಾನದಲ್ಲಿ ರೈತರು ಉಪ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇದರಿಂದ ರೈತರ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆ ಸೃಷ್ಟಿಯಾಗಲಿದೆ ಎಂದರು.ಭಾರತವು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲಿ ಕ್ರಾಂತಿ ಬಳಿಕ ಈಗ ಸಮೃದ್ಧಿ ಕ್ರಾಂತಿಗೆ ಕಾಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮೃದ್ದಿ ಕ್ರಾಂತಿಗೆ ಕರೆ ನೀಡಿದ್ದು, ಕೃಷಿ ಸಂಶೋಧನೆಗಳು ಆ ದಿಕ್ಕಿನಲ್ಲಿ ಸಾಗಬೇಕಿದೆ. ಕೃಷಿಯಲ್ಲಿನ ತಂತ್ರಜ್ಞಾನವು ರೈತರ ಉತ್ಪನ್ನಗಳ ಮಾರುಕಟ್ಟೆಯ ನೆರವಿಗೆ ಬರಬೇಕಿದೆ. ಆ ಮೂಲಕ ಕೃಷಿ ಲಾಭದಾಯಕವಾಗಬೇಕು, ಇದರಿಂದ ಯುವಜನರು ಕೂಡ ಕೃಷಿಯತ್ತ ಮುಖ ಮಾಡುವ ವಾತಾರವಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯ ವಾರ್ಷಿಕೋತ್ಸವವನ್ನು ಗುರುತಿಸಲು ವಿಶ್ವ ಆಹಾರ ದಿನವನ್ನು 1945 ಅ.16 ರಂದು ಪ್ರಾರಂಭಿಸಲಾಯಿತು. ಪ್ರಪಂಚದಾದ್ಯಂತ ಬಡತವನ್ನು ಕಡಿಮೆ ಮಾಡುವುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವುದು ಇದರ ಮುಖ್ಯ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ.ಜಗದೀಶ್ ವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಕಿರಣ್ ಕುಮಾರ್, ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಹೆಚ್.ಎಸ್.ಶಶಾಂಕ್, ಕೃಷಿ ವಿವಿಯ ಡೀನ್ ಡಾ.ಡಿ.ತಿಪ್ಪೇಶ್, ವಿವಿಯ ವಿಸ್ತರಣಾ ನಿರ್ದೇಶಕರು ಜಿ.ಕೆ.ಗೀರೀಶ್ ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ.ಬಿ.ಸಿ.ಹನುಮಂತಸ್ವಾಮಿ, ವಿವಿ ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾ ನಾಯ್ಕ್, ವಿವಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಹಾಜರಿದ್ದರು.