ಕನ್ನಡಪ್ರಭ ವಾರ್ತೆ ಪಾವಗಡ
ಇಲ್ಲಿನ ಉಪನೋಂದಣಾಧಿಕಾರಿ ರಾಧಮ್ಮ ಅವರು ತಮ್ಮ ಇಲಾಖೆಯಲ್ಲಿ ಭ್ರಷ್ಟಚಾರ ಹಾಗೂ ಕರ್ತವ್ಯ ಲೋಪ ಎಸಗುತ್ತಿದ್ದಾರೆಂದು ಆರೋಪಿಸಿ ಹಾಗೂ ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಸಿಎಂ ಆಗಮನದ ಸಿದ್ಧತೆ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರಿಗೆ ಮನವಿ ಸಲ್ಲಿಸಿದ ರೈತ ಸಂಘದ ಅಧ್ಯಕ್ಷ ಜಿ.ಎನ್.ನರಸಿಂಹರೆಡ್ಡಿ ಮಾತನಾಡಿ, ಕಚೇರಿಗೆ ಬರುವ ಸಾರ್ವಜನಿಕರಿಗೆ ಮತ್ತು ರೈತರಿಗೆ ಸುಳ್ಳು ತಕರಾರುಗಳನ್ನು ಮಾಡಿ ಇಲ್ಲ ಸಲ್ಲದ ಕಾನೂನುಗಳನ್ನು ಮುಂದೆ ಇಟ್ಟು ಲಂಚಕ್ಕೆ ಬೇಡಿಕೆ ಇಡುತ್ತಾ ಹಿಂಸೆ ನೀಡುತ್ತಿದ್ದಾರೆ. ನೋಂದಣಿ ಹಣವನ್ನು ಕಟ್ಟಿದ್ದರೂ ಕಚೇರಿ ಮಾಮೂಲು ಕೊಡಬೇಕೆಂದು ಲಂಚಕ್ಕಾಗಿ ಸಾಯಂಕಾಲದ ವರೆಗೆ ನೋಂದಣಿಯನ್ನು ನೋಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.
ಜಮೀನು ಹಾಗೂ ನಿವೇಶನಕ್ಕೆ ಸಂಬಂಧಪಟ್ಟ ವಿಚಾರವಾಗಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಆಗಮಿಸುವ ರೈತರಿಗೆ ಹೆಚ್ಚು ತೊಂದರೆ ಕೊಡುವುದಲ್ಲದೇ, ದಳ್ಳಾಳಿಗಳ ಮೂಲಕ ಸಾವಿರಾರು ರುಗಳ ಲಂಚಕ್ಕೆ ಬೇಡಿಕೆಯಿಡುವುದು ಇಲ್ಲಿ ಸಾಮಾನ್ಯವಾಗಿದೆ. ಭ್ರಷ್ಟ ಅಧಿಕಾರಿ ಮೊದಲು ತೊಲಗಬೇಕು. ಇವರ ಕಿರುಕುಳದಿಂದ ರೈತರು ನಿತ್ಯ ಕಣ್ಣೀರುಡುವ ಸ್ಥಿತಿ ನಿರ್ಮಾಣವಾಗಿದೆ. ಅವ್ಯವಹಾರ ನಿರತ ನೋಂದಣಾಧಿಕಾರಿಯನ್ನು ತಕ್ಷಣ ವರ್ಗಾವಣೆಗೊಳಿಸಬೇಕು. ವಿಳಂಬ ಮಾಡಿದರೆ ಜು.21ರಂದು ಪಾವಗಡಕ್ಕೆ ಸಿಎಂ ಆಗಮಿಸುವ ವೇಳೆ ರೈತ ಸಂಘದಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಜಮೀನು ಹಾಗೂ ನಿವೇಶನದ ದಾಖಲೆ ನೋಂದಣಿಗೆ, ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಶುಲ್ಕ ಹೊರತುಪಡಿಸಿ, ಕಚೇರಿಗೆ ಆಗಮಿಸುವ ಜನಸಾಮಾನ್ಯರಿಂದ ಹಣ ಲೋಟಿ ಮಾಡುವ ದಂಧೆಯಲ್ಲಿ ಉಪನೋಂದಣಾಧಿಕಾರಿ ರಾಧಮ್ಮ ನಿರತರಾಗಿದ್ದು, ಪ್ರಶ್ನಿಸಿದರೆ ನಾನು ಯಾರಿಗೂ ಕೇರ್ ಮಾಡುವುದಿಲ್ಲ. ನೀವು ಶಾಸಕರಿಗಲ್ಲ, ಜಿಲ್ಲಾಧಿಕಾರಿ ಸೇರಿ ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ರೈತರಿಗೆ ಉಢಾಫೆ ಉತ್ತರ ನೀಡುತ್ತಾರೆ. ಸೋಲಾರ್ ಪಾರ್ಕ್‌ಗಳ ನಿರ್ಮಾಣದ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ರೈತರ ಜಮೀನು ಸೋಲಾರ್ ಕಂಪನಿಗಳಿಗೆ ನೀಡುತ್ತಿರುವುದರಿಂದ ದಾಖಲೆ ಸರಿಯಿದ್ದರೂ ಲಂಚಕ್ಕಾಗಿ ಕಂಪನಿ ಹಾಗೂ ರೈತರಿಗೆ ಹಿಂಸೆ ನೀಡುವುದು ಸಾಮಾನ್ಯವಾಗಿದೆ. ಉಪ ನೋಂದಣಾಧಿಕಾರಿಯ ವ್ಯಾಪಕ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವರೆ ಇಲ್ಲದಾಂಗಿದೆ ಕಚೇರಿಯಲ್ಲಿ ವಿಪರೀತ ದಳ್ಳಾಳಿಗಳ ಹಾವಳಿ ಇದ್ದು ದಾಖಲೆ ನಿರ್ವಹಣೆಯಲ್ಲಿ ಮಧ್ಯವರ್ತಿಗಳ ಮೂಲಕ,ವ್ಯವಹಾರ ಮಾಡುವ ಮೂಲಕ ರೈತರ ರಕ್ತ ಹೀರುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ವೀರಕ್ಯಾತಪ್ಪ, ಶ್ರೀನಿವಾಸರೆಡ್ಡಿ, ಹನುಮಂತರೆಡ್ಡಿ, ಬಳಸಮುದ್ರ ಮಾನಂ ಗೋಪಾಲ್, ಎಚ್.ಜಯರಾಮರೆಡ್ಡಿ, ಕನ್ನಮೇಡಿ ಕೃಷ್ಣಮೂರ್ತಿ, ತಾಳೇಮರದಹಳ್ಳಿ ಗೋವಿಂದಪ್ಪ, ಅಂಜಿನಪ್ಪ, ನಾಗರಾಜು, ಓಬಳೇಶಪ್ಪ, ತಿಪ್ಪೇಸ್ವಾಮಿ ಇತರರಿದ್ದರು.ಕೋಟ್..
ಇಲ್ಲಿರುವ ಉಪ ನೋಂದಾಣಾಧಿಕಾರಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪ್ರಶ್ನಿಸಲು ಹೋದರೆ ನಮ್ಮ ಮೇಲೆಯೇ ದೌರ್ಜನ್ಯ ವ್ಯಸಗುತ್ತಿದ್ದಾರೆ. ಈ ಸಂಬಂಧ ರಾಜ್ಯಮಟ್ಟದಲ್ಲಿಯೂ ಸಹ ದೂರು ನೀಡಲಾಗಿದೆ. ಆದರೂ ಸಹ ಇವರನ್ನು ಇಲ್ಲಿಂದ ವರ್ಗಾವಣೆ ಮಾಡದೆ ಇರುವುದು ಸಹ ಸಾಕಷ್ಟು ಅನುಮಾನಗಳಿಗೆ ಕಾರವಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳದೇ ಹೋದರೆ ರೈತರ ಜೊತೆಗೂಡಿ ಸಿಎಂ ಕಾರ್ಯಕ್ರಮದಲ್ಲಿ ಅಧಿಕಾರಿಯ ವಿರುದ್ದ ಪ್ರತಿಭಟನೆ ನಡೆಸಲಾಗುವುದು. - ಜಿ.ಎನ್.ನರಸಿಂಹರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ