ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ರೈತರು, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಹಾಯಕರಿಗೆ ಮನವಿ ಸಲ್ಲಿಸಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಅಡಿಯಲ್ಲಿ ಬರುವ ತಂಬಾಕು ಮಂಡಳಿ ತಂಬಾಕು ರಫ್ತು ಹಾಗೂ ಬೇಡಿಕೆಗಳನ್ನು ಪೂರೈಸಿ ಸರಿದೂಗಿಸುವ ಕೆಲಸ ಮಾಡುತ್ತಿದೆ. ವಿಶೇಷವಾಗಿ ಎಫ್‌ಸಿಎ ತಂಬಾಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ತಂಬಾಕು ರಫ್ತು ಮಾರುಕಟ್ಟೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ತಂಬಾಕು ಬೆಳೆಗಾರರಿಗೆ ಗರಿಷ್ಠ ೧೦೦ ಮಿಲಿಯನ್ ಕೆಜಿ ತಂಬಾಕು ಬೆಳೆಯಲು ಅನುಮತಿ ನೀಡಿದ್ದು, ಕಳೆದ ಮೇ, ಜೂನ್, ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ತಂಬಾಕು ಉತ್ಪಾದನೆಗೆ ಹಿನ್ನಡೆ ಉಂಟಾಗಿದೆ. ಈಗ ೮೦ ರಿಂದ ೮೫ ಮಿಲಿಯನ್ ಕೆಜಿ ತಂಬಾಕು ಉತ್ಪಾದಿಸುವ ಆಶಾಭಾವನೆ ಹೊಂದಿದೆ. ಕರ್ನಾಟಕ ತಂಬಾಕು ಬೆಳೆಗಾರರಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು, ತಂಬಾಕು ಮಂಡಳಿ ಬೆಲೆ ಕಡಿತ ಮಾಡುವ ಧೋರಣೆಯಿಂದಾಗಿ ಹಿನ್ನಡೆ ಉಂಟಾಗಿದೆ ಎಂದು ಆರೋಪಿಸಿದರು.ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ರಾಮನಾಥಪುರ, ಎಚ್.ಡಿ.ಕೋಟೆ ಹಾಗೂ ಮೂರು ಮುಖ್ಯ ಜಿಲ್ಲೆಗಳಾದ ಮೈಸೂರು, ಹಾಸನ ಮತ್ತು ಚಾಮರಾಜನಗರಗಳಲ್ಲಿ ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ. ೪೦ ಸಾವಿರಕ್ಕೂ ಹೆಚ್ಚಿನ ನೋಂದಾಯಿತ ತಂಬಾಕು ಬೆಳೆಗಾರರು ೫೦ ಸಾವಿರ ಬ್ಯಾರನ್‌ಗಳನ್ನು ಹೊಂದಿದ್ದು, ಸುಮಾರು ೬೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಾರೆ. ತಂಬಾಕು ಮಂಡಳಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಬೆಲೆ ಕಡಿಮೆ ಇರುವುದರಿಂದ ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದರು.
ತಂಬಾಕು ನಿಯಮಗಳಲ್ಲಿ ಪ್ರಮುಖ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ. ತಂಬಾಕು ಮಂಡಳಿಯು ರೈತರ ಹಿತವನ್ನು ಕಾಪಾಡಲು ಬೆಳೆ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅಧಿಕ ಉತ್ಪಾದಕ ತಂಬಾಕಿಗೆ ವೈಜ್ಞಾನಿಕ ರೀತಿಯಲ್ಲಿ ದಂಡವನ್ನು ವಿಧಿಸಬೇಕಾಗಿದೆ. ಇದರಿಂದ ಅಧಿಕ ಉತ್ಪಾದಕ ರಾಜ್ಯಗಳಿಗೆ ಬೆಳೆ ನಿಯಂತ್ರಣದ ಸೂತ್ರ ಜಾರಿಯಾದರೆ ಅಧಿಕ ಉತ್ಪಾದನೆ ಕಡಿಮೆಯಾಗುವ ನಿರೀಕ್ಷೆ ಇದೆ. ಹೀಗಾಗಿ ವೈಜ್ಞಾನಿಕ ದರ ನಿಗದಿಪಡಿಸಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿದರು.
ರೈತ ಮುಖಂಡರಾದ ಎಚ್.ಬಿ.ಕೃಷ್ಣೇಗೌಡ, ಎಸ್.ಕೆ.ಯೋಗಣ್ಣ, ರಮೇಶ, ಪ್ರದೀಪ, ಎಸ್.ಬಿ. ಬಲರಾಮೇಗೌಡ, ರವಿ, ವಿವೇಕ್, ರವಿಕುಮಾರ್, ಆಂಜನೀಗೌಡ, ಲತಾಶಂಕರ್, ಕೆ.ಬಿ. ಜಯಣ್ಣ, ಚನ್ನಯ್ಯ ಸೇರಿದಂತೆ ನೂರಾರು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.