ಹೆಸ್ಕಾಂ ವಿರುದ್ಧ ರೈತರ ಪ್ರತಿಭಟನೆ

KannadaprabhaNewsNetwork |  
Published : Jul 28, 2026, 03:00 AM IST
27ಬದ್ದ್ದ್ವದ್ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೀಳಗಿಮಳೆಯಾಗದೇ ತೀವ್ರ ಮುಂಗಾರು ಬರಗಾಲ ಪರಿಸ್ಥಿತಿ ಎದುರಾಗಿದ್ದು, ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರ ಆದೇಶಿಸಿದಂತೆ 7 ಗಂಟೆಗಳ ಕಾಲ ನಿರಂತರ ಹಾಗೂ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಪೂರೈಸುವಲ್ಲಿ ಹೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಿವನಗೌಡ ಪಾಟೀಲ ಅವರ ನೇತೃತ್ವದಲ್ಲಿ ರೈತರು ಹೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಧರಣಿ ಪ್ರತಿಭಟನೆ ನೆಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೀಳಗಿ

ಮಳೆಯಾಗದೇ ತೀವ್ರ ಮುಂಗಾರು ಬರಗಾಲ ಪರಿಸ್ಥಿತಿ ಎದುರಾಗಿದ್ದು, ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರ ಆದೇಶಿಸಿದಂತೆ 7 ಗಂಟೆಗಳ ಕಾಲ ನಿರಂತರ ಹಾಗೂ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಪೂರೈಸುವಲ್ಲಿ ಹೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಿವನಗೌಡ ಪಾಟೀಲ ಅವರ ನೇತೃತ್ವದಲ್ಲಿ ರೈತರು ಹೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಧರಣಿ ಪ್ರತಿಭಟನೆ ನೆಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಿವನಗೌಡ ಪಾಟೀಲ ಅವರು, ಸರ್ಕಾರವು ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕೆಂದು ಸ್ಪಷ್ಟ ಆದೇಶ ನೀಡಿದ್ದರೂ, ಬೀಳಗಿ ತಾಲೂಕಿನ ಅಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕಳೆದ ಒಂದು ವಾರದಿಂದ ಕೇವಲ 6 ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೆಲವು ಕಡೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದ್ದು, ಬೀಳಗಿ ತಾಲೂಕಿನ ರೈತರ ಬಗ್ಗೆ ಮಾತ್ರ ತಾರತಮ್ಯ ಎಸಗಲಾಗುತ್ತಿದೆ. ಮಳೆಯಿಲ್ಲದೆ ಬೆಳೆಗಳು ಒಣಗಿ ಹೋಗುತ್ತಿದ್ದು, ವಿದ್ಯುತ್ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಂಡರು.

​ವಿದ್ಯುತ್ ಪೂರೈಕೆ ಸರಿಪಡಿಸುವಂತೆ ಈ ಹಿಂದೆ ಮನವಿ ಸಲ್ಲಿಸಿ ಜುಲೈ 24ರ ಶುಕ್ರವಾರದವರೆಗೆ ಗಡುವು ನೀಡಲಾಗಿತ್ತು. ಸೋಮವಾರದ ಒಳಗಾಗಿ ಸರಿಪಡಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಇದುವರೆಗೂ ಯಾವುದೇ ಲಿಖಿತ ಭರವಸೆ ಅಥವಾ ಸೂಕ್ತ ಪರಿಹಾರ ನೀಡಿಲ್ಲ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ರಾತ್ರಿ ವೇಳೆಯಲ್ಲಿ ಕನಿಷ್ಠ 4 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಹಾಗೂ ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಅವರು ಆಗ್ರಹಿಸಿದರು.

​ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ ಬೇರೆ ದಾರಿಯಿಲ್ಲದೆ ರೈತರು ಕಚೇರಿಯ ಮುಂಭಾಗದಲ್ಲಿಯೇ ಒಲೆ ಹಚ್ಚಿ, ಅಡುಗೆ ಮಾಡಿ ಉಣ್ಣುವ ಸ್ಥಿತಿಗೆ ತಲುಪಿದ್ದಾರೆ. ಸೂಕ್ತ ಲಿಖಿತ ಭರವಸೆ ದೊರೆಯುವವರೆಗೂ ಮತ್ತು 7 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವವರೆಗೂ ಕಚೇರಿಯಿಂದ ಕದಲುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

​ಅಧಿಕಾರಿಗಳು, ಹೆಸ್ಕಾಂ ಕಚೇರಿಯ ಎದುರು ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದರು. ರೈತರ ಹಾಗೂ ಪ್ರತಿಭಟನಾಕಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಅಧಿಕಾರಿಗಳು, ಮನವಿ ಸ್ವೀಕರಿಸಿದರು.

ಈ ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ರೈತರ ಹೋರಾಟದ ಶಕ್ತಿಯಿಂದ ಬೆಳಗಾವಿಯ ಪ್ರತಿಭಟನೆಯಲ್ಲಿ ಸರ್ಕಾರ ಸ್ಪಂದಿಸಿದಂತೆ, ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡದೆ ನಿಯಮಿತವಾಗಿ ಸಂಪೂರ್ಣ 7 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಬೇಕು. ರಾತ್ರಿ ವೇಳೆಯಲ್ಲಿ ಮಳೆ-ಗಾಳಿಯ ಸಮಸ್ಯೆ ಇರುವುದರಿಂದ ಆದಷ್ಟು ಹಗಲು ವೇಳೆಯಲ್ಲೇ ಗುಣಮಟ್ಟದ ವಿದ್ಯುತ್ ನೀಡಿ, ರೈತರು ಮತ್ತೆ ಮುಷ್ಕರ ಅಥವಾ ಉಪವಾಸ ಸತ್ಯಾಗ್ರಹ ನಡೆಸುವ ಪರಿಸ್ಥಿತಿ ತರಬಾರದು ಎಂದು ವಿನಂತಿಸಲಾಗಿದೆ.

-ಪ್ರವೀಣ ಪಾಟೀಲ, ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾ ಬಲೆಗೆ ಬಿದ್ದ ಉಪಖಜಾನೆ ಅಧಿಕಾರಿಗಳು
ಸ್ಫೋಟಕ ಬಳಕೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ