ಹೈ ಟೆನ್ಶನ್ ತಂತಿ ಮತ್ತು ವಿದ್ಯುತ್ ಗೋಪುರದ ಕಂಬ ಹಾಕುವುದಕ್ಕೆ ವಿರೋಧ । ಕಾಮಗಾರಿ ತಡೆದು ಆಕ್ರೋಶ
ಕನ್ನಡಪ್ರಭ ವಾರ್ತೆ ಕೊಪ್ಪಳಪರಿಹಾರ ನೀಡದೆಯೇ ಜಮೀನಿನಲ್ಲಿ ಹೈ ಟೆನ್ಶನ್ ತಂತಿ ಮತ್ತು ವಿದ್ಯುತ್ ಗೋಪುರದ ಕಂಬ ಹಾಕುವುದನ್ನು ವಿರೋಧಿಸಿ ರೈತರು ಸೋಮವಾರ ಹುಲಿಗೇರಿ ಗ್ರಾಮದ ಬಳಿ ಪ್ರತಿಭಟನೆ ನಡೆಸಿ ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಭೂಮಿಯಲ್ಲಿ ವಿದ್ಯುತ್ ಗೋಪುರದ ಕಂಬ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ, ರೈತರ ಭೂಮಿಗೆ ಪರಿಹಾರ ನೀಡಿಲ್ಲ. ಆದರೂ ದೌರ್ಜನ್ಯ ಮಾಡಿ, ಕಾಮಗಾರಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.ಸೆರೆಟಿಕಾ ರಿನಿವೇಬಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಹಲಗೇರಿ, ವೀರಾಪುರ, ಲಕಮಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೈತರ ಜಮೀನಿನಲ್ಲಿ ಸೆರೆಟಿಕಾ ರಿನಿವೇಬಲ್ಸ್ ಇಂಡಿಯಾ 1 ಪ್ರೈವೇಟ್ ಲಿಮಿಟೆಡ್ ಕಂಪನಿಯವರು 220/110 ಕೆವಿ ವಿದ್ಯುತ್ ಮಾರ್ಗ ಮತ್ತು ಟವರ್ ನಿರ್ಮಾಣಕ್ಕೆ ಅನುಮತಿ ಪಡೆಯದೇ ಟವರ್ ನಿರ್ಮಾಣ ಮಾಡಿದ್ದು, ವಿದ್ಯುತ್ ಮಾರ್ಗ ಕೂಡ ಅಳವಡಿಸುತ್ತಿದ್ದಾರೆ. ಜಮೀನು ಕಳೆದುಕೊಂಡ ರೈತರಿಗೆ ಕಂಪನಿಯವರು ಭೂಪರಿಹಾರ ನೀಡದೇ ವಂಚನೆ ಮಾಡಿದ್ದಾರೆ ಎಂದು ರೈತರು ಕಿಡಿಕಾರಿದರು.ವಿದ್ಯುತ್ ಸ್ಥಾವರ ಹಾಕಿರುವ ಪ್ರದೇಶ ಹಾಗೂ ವಿದ್ಯುತ್ ಮಾರ್ಗ ಹಾದು ಹೋಗುವ ಕೆಳಗಿನ ಪ್ರದೇಶವನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ. ವಿದ್ಯುತ್ ಮಾರ್ಗಗಳು ಹಾದು ಹೋಗುವ ಜಮೀನುಗಳನ್ನು ಬೇರೆಯವರು ಖರೀದಿಸಲು ಸಹ ಯೋಚನೆ ಮಾಡುತ್ತಾರೆ. ಅಲ್ಲದೇ ಟವರ್ ನಿರ್ಮಾಣ ಮಾಡಿರುವ ಜಮೀನು ಅಥವಾ ವಿದ್ಯುತ್ ಮಾರ್ಗ ಹಾದು ಹೋಗಿರುವ ಜಮೀನನ್ನು ನಾವುಗಳು ಬಿನ್ ಶೇಷ್ಕಿ ಮಾಡಲು ಸಹ ಆಗುವುದಿಲ್ಲ ಹಾಗೂ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಟವರ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಮೀನುಗಳ ಭೂಮಾಲೀಕರು ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಾಗಿರುವುದರಿಂದ ಸೂಕ್ತ ಹಾಗೂ ನ್ಯಾಯಯುತವಾದ ಪರಿಹಾರ ಧನ ನೀಡಬೇಕು. ಕೆಲ ರೈತರಿಗೆ ಭೂಪರಿಹಾರ ನೀಡುತ್ತೇವೆ ಎಂದು ಈವರೆಗೂ ನಯಾಪೈಸೆ ಪರಿಹಾರ ನೀಡಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ನಮಗೆ ನ್ಯಾಯ ಒದಗಿಸಿಕೊಡಬೇಕು. ಭೂಪರಿಹಾರ ನೀಡುವವರೆಗೂ ಟವರ್ ನಿರ್ಮಾಣ ಮತ್ತು ವಿದ್ಯುತ್ ಮಾರ್ಗ ಅಳವಡಿಕೆಗೆ ನಾವು ಬಿಡಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವರುಣ್ ಕುಮಾರ್ ನಿಟ್ಟಾಲಿ, ಹನುಮಂತ ಹಳ್ಳಿಕೇರಿ, ಗುಡದಪ್ಪ ಬನಪ್ಪನ್ನವರ್, ಬಸಪ್ಪ ಬನಪ್ಪನ್ನವರ್, ಮಂಜುನಾಥ ಹಂಚಿನಾಳ, ಬಸವರಾಜ ಹಡಪದ, ದೇವಪ್ಪ, ಕರಿಯಪ್ಪ ಹಳ್ಳಿಕೇರಿ, ಶಿವಕುಮಾರ್ ಹೂಗಾರ ಸೇರಿದಂತೆ ಗ್ರಾಮಸ್ಥರು ಇದ್ದರು.ಕಾಲ್ಕಿತ್ತ ಕಾರ್ಮಿಕರು, ಅಧಿಕಾರಿಗಳು:ರೈತರು ಪ್ರತಿಭಟನೆ ಮಾಡುತ್ತಿದ್ದಂತೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತರು. ರೈತರ ಸಮಸ್ಯೆಗೆ ಸ್ಪಂದಿಸದೇ ಕಾಮಗಾರಿ ಮುಂದುವರೆಸಿದ್ದರಿಂದ ಆಕ್ರೋಶಗೊಂಡ ರೈತರು ಕೆಲಸ ನಿಲ್ಲಿಸಲು ಬಿಗಿಪಟ್ಟು ಹಿಡಿದಿದ್ದರಿಂದ ಅಲ್ಲಿದ್ದ ಕಂಪನಿಯ ಪ್ರತಿನಿಧಿಗಳು ಜಾಗ ಕಾಲಿ ಮಾಡಿದರು.