ಕನ್ನಡಪ್ರಭ ವಾರ್ತೆ ನರಗುಂದ
ತಾಲೂಕಿನ ಕಲಕೇರಿ, ಹುಣಶಿಕಟ್ಟಿ, ಜಗಾಪೂರ, ಬನಹಟ್ಟಿ, ಮೂಗನೂರ, ಮದುಗುಣಕಿ, ಬೈರನಹಟ್ಟಿ, ಹಿರೇಕೊಪ್ಪ, ಗುರ್ಲಕಟ್ಟಿ, ಚಿಕ್ಕನರಗುಂದ ಸೇರಿದಂತೆ ಅನೇಕ ಗ್ರಾಮಗಳ ರೈತರು ಸೋಮವಾರ ಹಿಂಗಾರಿ ಬಿತ್ತನೆ ಕಡಲೆ ಬೀಜ ಪಡೆಯಲು ಬೆಳಗ್ಗೆ 7ರಿಂದಲೇ ಸರದಿಯಲ್ಲಿ ನಿಂತು ಕಾದಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಸರ್ವರ್ ಮತ್ತು ವಿದ್ಯುತ್ ಸಮಸ್ಯೆ ಕಾರಣಕ್ಕೆ ಬೀಜ ವಿತರಣೆ ಮಾಡಲು ವಿಳಂಬ ಮಾಡಿದ್ದಾರೆ. ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ವಿಷಯದ ತಿಳಿದ ಪೊಲೀಸ್ ಅಧಿಕಾರಿಗಳು ರೈತರ ಮನವೊಲಿಸಿ ಬೀಜ ಕೊಡಿಸುವ ಭರವಸೆ ನೀಡಿದ್ದಾರೆ. ಕೊನೆಗೆ ಮಧ್ಯಾಹ್ನ 12ರ ವೇಳೆಗೆ ಬೀಜ ವಿತರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.ಕೃಷಿ ಅಧಿಕಾರಿ ಎಫ್.ಎಸ್. ಬೆಳವಟಿಗಿ ಮಾಹಿತಿ ನೀಡಿ, ಕೆಲವು ಬೀಜದ ಕಂಪನಿ ಕ್ಯೂಆರ್ ಕೋಡ್ ಸ್ಕ್ಯಾನ್ ಆಗ್ತಾಯಿಲ್ಲ. ಹೀಗಾಗಿ ಬೀಜ ವಿತರಿಸುವಲ್ಲಿ ವಿಳಂಬವಾಗಿದೆ. ಆದರೆ ರೈತರು ಇದನ್ನೆಲ್ಲ ಕೇಳಲ್ಲ, ಅವರಿಗೆ ಬೀಜ ಕೊಡಲೇಬೇಕಾಗಿದೆ. ಭೂಮಿಯಲ್ಲಿ ಹಸಿ ಇದ್ದಾಗಲೇ ಬಿತ್ತನೆ ಮಾಡಬೇಕಾಗಿದೆ. ಹೀಗಾಗಿ ರೈತರ ಆಧಾರ ಕಾರ್ಡ ನಂಬರ ಬರೆದುಕೊಂಡು ರಿಜಿಸ್ಟರ್‌ನಲ್ಲಿ ಎಂಟ್ರೀ ಮಾಡ್ಕೊಂಡು ಬೀಜದ ಪಾಕೀಟು ನೀಡುತ್ತಿದ್ದೇವೆ ಎಂದರು.
ಈ ವೇಳೆ ರೈತರಾದ ರುದ್ರಗೌಡ ಭರಮಗೌಡ್ರ, ದುರ್ಗಪ್ಪ ಮಾದರ, ಸುನೀಲಕುಮಾರ ಮ್ಯಾಗೇರಿ, ಶಿವರುದ್ರಪ್ಪ ಕುರಿ, ಶಿವಪ್ಪ ಮಾದರ, ಭೀಮಪ್ಪ ತಳವಾರ, ಫಕೀರಪ್ಪ ಕಳ್ಳಿಮನಿ, ಫಕೀರಪ್ಪ ಎಲಿಗಾರ, ನಾಗಪ್ಪ ಗಡೇಕಾರ ಹಾಗೂ ವಿವಿಧ ಗ್ರಾಮಗಳ ರೈತರು ಇದ್ದರು.