ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಐದುದೀಪದ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ತಹಸೀಲ್ದಾರ್ ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು.
ರೈತಸಂಘದ ಹಿರಿಯ ಮುಖಂಡ ಕೆ.ಟಿ.ಗೋವಿಂದೇಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತ ವಿರೋಧಿ ಧೋರಣೆ ನೀತಿ ಅನುಸರಿಸುತ್ತಿವೆ. ರೈತನನ್ನು ಜೀತದಾಳುಗಳಂತೆ ನೋಡುತ್ತಿವೆ. ಅಧಿಕಾರದಲ್ಲಿರುವ ಆಡಳಿತ ಪಕ್ಷಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಿವೆ ಹೊರತು, ದುರ್ಬಲರು, ಬಡವರು, ರೈತರ ಬದುಕು, ಆದಾಯವನ್ನು ಸುಸ್ಥಿತಗೊಳಿಸುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.ರೈತಸಂಘದ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಭತ್ತ ಕಟಾವು ಮುಗಿದರೂ ಸರಕಾರಗಳು ಮಾತ್ರ ಭತ್ತ, ರಾಗಿ ಖರೀದಿ ಕೇಂದ್ರ ಆರಂಭಿಸಿಲ್ಲ. ಇದರಿಂದ ರೈತರು ಬೆಳೆದ ಭತ್ತವನ್ನು ದಲ್ಲಾಳಿಗಳು ಸಿಕ್ಕಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಕ್ರೋಫೈನಾನ್ಸ್ ಹಾವಳಿಯಿಂದ ಸಾಕಷ್ಟು ಮಂದಿ ತೊಂದರೆಗೆ ಸಿಲುಕಿ ಊರುಗಳನ್ನೇ ಬಿಡುತ್ತಿದ್ದಾರೆ. ಹಾಗಾಗಿ ಮೈಕ್ರೋ ಫೈನಾನ್ಸ್ ಗಳನ್ನು ಮುಚ್ಚಿಸಬೇಕು, ಕೆಆರ್ ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಬಿಡುವುದಾಗಿ ತಿಳಿಸಿದ್ದಾರೆ. ಜೂನ್, ಜುಲೈ ತಿಂಗಳಲ್ಲಿ ನಾಲೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪ್ರಕಾಶ್, ರಾಘವ, ದಯಾನಂದ, ಕೋಕಿಲ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.