ಕೆಆರ್ ಎಸ್ ನಿಂದ ತಮಿಳುನಾಡಿಗೆ ನೀರು ಬಿಡುಗಡೆ ನದಿಗಿಳಿದು ರೈತರ ಪ್ರತಿಭಟನೆ

KannadaprabhaNewsNetwork |  
Published : Nov 08, 2026, 01:45 AM IST
7ಕೆಎಂಎನ್ ಡಿ21 | Kannada Prabha

ಸಾರಾಂಶ

ಸುಪ್ರೀಂ ಕೋರ್ಟ್‌ಗೆ ಸರಿಯಾಗಿ ಮೇಲ್ಮನವಿ ಸಲ್ಲಿಸದ ಕಾರಣದಿಂದಾಗಿ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವಂತಾಗಿದೆ. ತಕ್ಷಣ ನೀರು ನಿಲ್ಲಿಸದೆ ಹೋದಲ್ಲಿ ರೈತರು ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಭೂಮಿ ತಾಯಿ ಹೋರಾಟ ಸಮಿತಿ ರೈತ ಸದಸ್ಯರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.

ಪಟ್ಟಣದ ಸ್ನಾನ ಘಟ್ಟದ ಬಳಿ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಹಾಗೂ ಹಿರಿಯ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ರೈತ ಕಾರ್ಯಕರ್ತರು ಕಾವೇರಿ ನದಿಗಿಳಿದು ಕಾವೇರಿ ನೀರಾವರಿ ಪ್ರಾಧಿಕಾರಗಳು, ರಾಜ್ಯ ಸರ್ಕಾರ, ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಸೇರಿ ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.

ನಂತರ ಕೆಎಸ್. ನಂಜುಂಡೇಗೌಡ ಮಾತನಾಡಿ, ಮೈಸೂರು ಮಹಾರಾಜರು ತಮ್ಮ ಒಡವೆಯನ್ನು ಮಾರಿ ಅಣೆಕಟ್ಟೆ ನಿರ್ಮಿಸಿ ಜಿಲ್ಲೆಯ ರೈತರ ಬದುಕು ಹಸನು ಮಾಡಿದ್ದರು. ಆದರೆ, ಇಂದು ನಮ್ಮನ್ನಾಳುತ್ತಿರುವ ಜನ ಪ್ರತಿನಿಧಿಗಳು ತಾವು ಹಾಗೂ ತಮ್ಮ ಕುಟುಂಬದ ಒಳಿತಿಗಾಗಿ ಹಣ, ಆಸ್ತಿ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಿನ ಜನಪ್ರತಿನಿಧಿಗಳಿಗೆ ರಾಜ್ಯದ ಜನರು ಹಾಗೂ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ನೀರು ಸಂರಕ್ಷಣೆ ಮಾಡಬೇಕಾದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ಅಣೆಕಟ್ಟೆಯನ್ನು ಬರಿದು ಮಾಡಿ ರೈತರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿವೆ ಎಂದು ಕಿಡಿಕಾರಿದರು.

ರಾಜ್ಯದ ಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರ ಪ್ರಾಧಿಕಾರ ಅಥವಾ ಸುಪ್ರೀಂ ಕೋರ್ಟ್‌ಗೆ ಸರಿಯಾಗಿ ಮನವರಿಗೆ ಮಾಡಿಕೊಡುವಲ್ಲಿ ವಿಫಲವಾಗಿರುವ ಕಾರಣ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುವಂತಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ ರಾಜ್ಯದ ಜನರನ್ನು ಕಾಪಾಡುವಂತೆ ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ ಕೃಷ್ಣೇಗೌಡ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯನ್ನು ಖಾಲಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ದಿನದಿಂದ ದಿನಕ್ಕೆ ಕಾವೇರಿ ನದಿ ನೀರು ಹೆಚ್ಚಳ ಮಾಡುವ ಮೂಲಕ ರೈತರಿಗೆ ವಿಷಕೊಟ್ಟು ಮೌನವಾಗಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ಗೆ ಸರಿಯಾಗಿ ಮೇಲ್ಮನವಿ ಸಲ್ಲಿಸದ ಕಾರಣದಿಂದಾಗಿ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವಂತಾಗಿದೆ. ತಕ್ಷಣ ನೀರು ನಿಲ್ಲಿಸದೆ ಹೋದಲ್ಲಿ ರೈತರು ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಎಂ.ವಿ ಕೃಷ್ಣ, ಗಂಜಾಂ ಮರಿಯಪ್ಪ, ಜಗದೀಶ್, ಡಿ.ಎಂ ಮಹೇಶ್, ಕಪರನಕೊಪ್ಪಲು ಸುರೇಶ, ಡಿ. ಮಂಜುನಾಥ್, ರಾಮಕೃಷ್ಣ, ಮಹಾಲಿಂಗು, ಕೆಂಪೇಗೌಡ, ಕಿರಂಗೂರು ಪುಟ್ಟಣ್ಣ, ಮಹದೇವು, ಮೇಳಾಪುರ ಬಾಲು, ದೇವರಾಜು, ಚಂದಗಾಲು ರಾಮಕೃಷ್ಣ, ಪುರುಷೋತ್ತಮ, ಕಪರನಕೊಪ್ಪಲು ಮಹೇಶ, ಪೈಲ್ವಾನ್ ನಾಗಣ್ಣ, ಅಚ್ಚಪ್ಪನಕೊಪ್ಪಲು ಕೃಷ್ಣ, ಕಡತನಾಳು ಚಾಮರಾಜು, ಕೆಂಗಾಲ್‌ಕೊಪ್ಪಲು ಪ್ರಕಾಶ್, ಮರಳಗಾಲ ಶಂಕರ್, ಹನುಮಂತನಗರ ಸ್ವಾಮಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ