ಕನ್ನಡಪ್ರಭ ವಾರ್ತೆ ಹಲಗೂರು
ಲಿಂಗಪಟ್ಟಣ ಗ್ರಾಮದ ಮುಖ್ಯ ಶಿಕ್ಷಕ ಸುಂದರಪ್ಪ ಅವರು ತಮ್ಮ ಜನ್ಮದಿನವನ್ನು ಕರೀಗೌಡನದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೀವ್ರ ಬಡತನದಲ್ಲಿ ವ್ಯಾಸಂಗ ಮಾಡುತ್ತಿರುವ 9 ವಿದ್ಯಾರ್ಥಿಗಳಿಗೆ ಉಚಿತವಾಗಿ ಅಕ್ಕಿ, ಬೇಳೆ, ಸೋಪು, ಟವಲು ಮತ್ತು ಅಗತ್ಯವಿರುವ ವಸ್ತುಗಳನ್ನು ನೀಡುವ ಮುಖಾಂತರ ಆಚರಿಸಿಕೊಂಡು ಮಾತನಾಡಿದರು.
ನಾನು ವೃತ್ತಿಯಲ್ಲಿ ಇದ್ದಾಗಲೂ ಸಹ ಅಂಗವಿಕಲರಿಗೆ, ಬುದ್ಧಿ ಮಾಂಧ್ಯರಿಗೆ ಹಾಗೂ ಬಡವರಿಗೆ ನನ್ನಿಂದಾಗುವ ಸಹಾಯವನ್ನು ನಾನು ಮತ್ತು ಸ್ನೇಹಿತರೊಡಗೂಡಿ ಮಾಡಿಕೊಂಡು ಬರುತ್ತಿದ್ದೇನೆ. ನಿವೃತ್ತಿ ನಂತರವೂ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ದೃಷ್ಟಿಯಿಂದ ಅನಿಕೇತನ ಲಯನ್ಸ್ ಸಂಸ್ಥೆ ಸದಸ್ಯನಾಗಿ ಸೇವೆ ಸಲ್ಲಿಸುತ್ತಾ ನನ್ನ ಹುಟ್ಟುಹಬ್ಬವನ್ನು ಬಡ ವಿದ್ಯಾರ್ಥಿಗಳ ಜೊತೆ ಆಚರಿಸಿಕೊಳ್ಳುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದರು.ಅನಿಕೇತನ ಲಯನ್ಸ್ ಕ್ಲಬ್ ಅಧ್ಯಕ್ಷ ಮೂರ್ತಿ ಮಾತನಾಡಿ, ಪ್ರತಿಯೊಬ್ಬರೂ ಸಹ ತಮ್ಮ ಹುಟ್ಟುಹಬ್ಬಗಳನ್ನು ದುಂದು ವೆಚ್ಚ ಮಾಡಿ ಆಚರಿಸುಕೊಳ್ಳುವುದಕ್ಕಿಂತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದರೆ ನೆರವಾಗುತ್ತದೆ ಎಂದು ಹೇಳಿದರು.
ಈ ವೇಳೆ ಶಾಲೆಯ ಲೀಲಾವತಿ, ಸೌಮ್ಯ ಕೆ.ಎಸ್.ಚೈತ್ರ, ಮುಖ್ಯ ಶಿಕ್ಷಕಿ ಪಿ.ರಾಧಾ ಸೇರಿದಂತೆ ಇತರರು ಇದ್ದರು.