ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ನರೇಗಲ್ಲಿನಲ್ಲಿ ಮಾನವ ಸರಪಳಿ ನಿರ್ಮಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Nov 26, 2025, 02:15 AM IST
ನರೇಗಲ್ಲಿನಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರೈತರಿಗೆ ಹೈಕೋರ್ಟ್ ಆದೇಶದಂತೆ ಬೆಂಬಲ ಬೆಲೆ ನೀಡಬೇಕು ಹಾಗೂ ನರೇಗಲ್ಲ ಹೋಬಳಿಯ ಯಾವುದೇ ಒಬ್ಬ ರೈತನಿಗೂ ಬೆಳೆ ಪರಿಹಾರಧನ ಇಲ್ಲಿಯವರೆಗೂ ಒಂದು ರು. ಸಿಕ್ಕಿಲ್ಲ. ಆದರೆ ಇದರ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಟೆಕ್ನಿಕಲ್ ಪ್ರಾಬ್ಲಂ ಎಂದು ರೈತರಿಗೆ ಸಬೂಬು ಹೇಳುತ್ತಾರೆಂದು ಹೋರಾಟಗಾರರು ಆರೋಪಿಸಿದರು.

ನರೇಗಲ್ಲ: ಗೋವಿನಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸುವುದು ಹಾಗೂ ಬೆಳೆ ಪರಿಹಾರದ ಬಿಡುಗಡೆ ಮತ್ತು ವಿಮಾ ಕಂಪನಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಖಂಡಿಸಿ ರೈತಸೇನಾ ಕರ್ನಾಟಕ ಸಂಘ ಹಾಗೂ ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆಯಲ್ಲಿ ರಸ್ತೆತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಹೋರಾಟ ನಡೆಸಲಾಯಿತು.ರೈತ ಮುಖಂಡ ಶರಣಪ್ಪ ಧರ್ಮಾಯತ ಮಾತನಾಡಿ, ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೇ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಕೇವಲ ರೈತರ ಮೇಲೆ ಯಾಕೆ ಈ ರೀತಿ ದಬ್ಬಾಳಿಕೆ ಅನ್ನೋದು ತಿಳಿಯುತ್ತಿಲ್ಲ. ರೈತರು ಬೆಳೆಯುವುದನ್ನು ಬಿಟ್ಟು ನೀವೆಲ್ಲ ಏನು ತಿನ್ನುತ್ತೀರಾ? ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಹಾಗೂ ರೈತರನ್ನು ದೇಶದ ಬೆನ್ನೆಲುಬು ಎಂದು ಹೇಳಿಕೊಂಡು ರೈತರ ಬೆನ್ನನ್ನು ಮುರಿಯುವ ಕೆಲಸವನ್ನು ಮಾಡುತ್ತಿದ್ದೀರಿ. ಈ ಕೆಲಸ ಇಲ್ಲಿಗೆ ನಿಲ್ಲಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ತೀವ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

ರೈತರಿಗೆ ಹೈಕೋರ್ಟ್ ಆದೇಶದಂತೆ ಬೆಂಬಲ ಬೆಲೆ ನೀಡಬೇಕು ಹಾಗೂ ನರೇಗಲ್ಲ ಹೋಬಳಿಯ ಯಾವುದೇ ಒಬ್ಬ ರೈತನಿಗೂ ಬೆಳೆ ಪರಿಹಾರಧನ ಇಲ್ಲಿಯವರೆಗೂ ಒಂದು ರು. ಸಿಕ್ಕಿಲ್ಲ. ಆದರೆ ಇದರ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಟೆಕ್ನಿಕಲ್ ಪ್ರಾಬ್ಲಂ ಎಂದು ರೈತರಿಗೆ ಸಬೂಬು ಹೇಳುತ್ತಾರೆ. ಆದಷ್ಟು ಬೇಗ ರೈತರಿಗೆ ಬೆಳೆ ಪರಿಹಾರದ ನೀಡಿ ಹಾಗೂ ಹೈಕೋರ್ಟ್ ಆದೇಶದಂತೆ ಗೋವಿನಜೋಳ, ಹೆಸರು ಬೆಳೆಯ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಈರುಳ್ಳಿಗೆ ಸರಿಯಾದ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಆನಂದ ಕೊಟಗಿ ಮಾತನಾಡಿ, ರೈತರ ಹೆಸರು ಹೇಳಿಕೊಂಡು ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ವಿಷಯದಲ್ಲಿ ರಾಜಕೀಯ ಮಾಡಬಾರದು. ನಿಷ್ಕಾಳಜಿ ಮಾಡಿದರೆ ರೈತ ಬಂಡಾಯ ಆಗುವುದರಲ್ಲಿ ಅನುಮಾನವಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟಕ್ಕೆ ಸಿದ್ಧ ಎಂದರು.ಹೋರಾಟಗಾರ ಉಮೇಶ್ ಪಾಟೀಲ ಮಾತನಾಡಿ, ಕೆಎಂಎಫ್ ಸಂಸ್ಥೆಯು ರೈತರಿಂದ ಹಾಲನ್ನು ತೆಗೆದುಕೊಂಡು ಸಂಸ್ಥೆ ನಡೆಸುತ್ತಿದೆ. ಆದರೆ ರೈತರು ಬೆಳೆದ ಗೋವಿನಜೋಳವನ್ನು ತೆಗೆದುಕೊಳ್ಳದೆ ಖಾಸಗಿ ಟೆಂಡರ್‌ನಲ್ಲಿ ಹೆಚ್ಚಿನ ದರಕ್ಕೆ ಖರೀದಿಸುತ್ತಿದೆ. ಆದರೆ ರೈತರಿಂದ ನೇರವಾಗಿ ಖರೀದಿಸದೆ ರೈತರ ಜತೆ ಚೆಲ್ಲಾಟವನ್ನು ಆಡುತ್ತಿದೆ ಎಂದು ಆರೋಪಿಸಿದರು.

ಚಂದ್ರು ಹೊನ್ನವಾಡ ಮಾತನಾಡಿದರು. ರುದ್ರೇಶ ಕೊಟಗಿ, ಮಹೇಶ ಜೋಳದ, ಮುತ್ತಣ್ಣ ಯಾವಗಲ್, ಆನಂದ ಮಾವಿನಕಾಯಿ, ವಿರುಪಾಕ್ಷಕ್ಕ ಲಕ್ಕನಗೌಡ್ರ, ಕಳಕಪ್ಪ ಮುಗಳಿ, ಶ್ರೀಕಾಂತ ಬೆಡಗಲ್, ಮಂಜುನಾಥ ಪಾಯಪ್ಪಗೌಡ್ರ, ಶೇಖಪ್ಪ ಲಕ್ಕನಗೌಡ್ರ, ಮಲ್ಲಿಕಾರ್ಜುನ ಪಾಟೀಲ, ಮಹೇಶ ಶಿವಶಿಂಪರ, ಮಲ್ಲನಗೌಡ ಮಲ್ಲನಗೌಡ್ರ, ಶಿವಪ್ಪ ಕಡೇತೋಟದ, ವೀರಯ್ಯ ಕಂಬಾಳಿಮಠ, ಶಿವಪ್ಪ ಲಕ್ಕನಗೌಡ್ರ, ಕಳಕಪ್ಪ ಅಬ್ಬಿಗೇರಿ, ಚಂದ್ರು ಲಕ್ಕನಗೌಡ್ರ, ಮಾಂತೇಶ ಹಿರೇಮಠ, ಮಂಜುನಾಥ ಕಮಲಾಪೂರ ಅನೇಕ ರೈತರು ಇದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ