ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ಹಾಗೂ ಕುಶಾಲನಗರ ಸಂಪರ್ಕ ಕಲ್ಪಿಸುವ ನಾಲ್ಕು ಪಥ ಹೆದ್ದಾರಿ ನಿರ್ಮಾಣದ ಕಾಮಗಾರಿ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು.ಇತ್ತೀಚೆಗೆ ಪಾಲಹಳ್ಳಿ, ಬೊಮ್ಮೂರು ಅಗ್ರಹಾರ, ಕಾರೇಕುರ, ಬೆಳಗೊಳ ಸೇರಿದಂತೆ ಇತರೆ ಗ್ರಾಮಗಳ ರೈತರು ಜಮೀನುಗಳಿಗೆ ತೆರಳಲು ಸರ್ವಿಸ್ ರಸ್ತೆ ಹಾಗೂ ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ಒತ್ತಾಯಿಸಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದ್ದರು.
ಶಾಸಕರು ಹಾಗೂ ಅಧಿಕಾರಿಗಳು ಹೆದ್ದಾರಿ ಕಾಮಗಾರಿ ಪರಿಶೀಲನೆ ವೇಳೆ ಸ್ಥಳೀಯ ರೈತರು ಆಗಮಿಸಿ ಹೆದ್ದಾರಿ ನಿರ್ಮಾಣಕ್ಕೆ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ. ರೈತರ ಜಮೀನು ವಶಪಡಿಸಿಕೊಳ್ಳುವ ಮುನ್ನ ರೈತರು ತಮ್ಮ ಜಮೀನುಗಳಿಗೆ ತೆರಳಲು ಸರ್ವಿಸ್ ರಸ್ತೆ ಮಾಡಿಕೊಡುವುದಾಗಿ ತಿಳಿಸಿದ್ದರು. ಇದೀಗ ಯಾವುದೇ ಸರ್ವಿಸ್ ರಸ್ತೆ ಹಾಗೂ ಅಂಡರ್ ಪಾಸ್ ನಿರ್ಮಿಸದೇ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳ ಮುಂದೆ ರೈತರು ತಮ್ಮ ಅಳಲು ತೋಡಿಕೊಂಡರು.ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ ಸ್ಥಳದಲ್ಲಿದ್ದ ಹೆದ್ದಾರಿ ಕಾಮಗಾರಿ ಅಧಿಕಾರಿಗಳಿಂದ ದಾಖಲೆ, ನಕ್ಷೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ರೈತರಿಗೆ ತೊಂದರೆಯಾದ ರೀತಿ ಕಾಮಗಾರಿ ನಡೆಸುವಂತೆ ಸೂಚಿಸಿದರು. ಹೆದ್ದಾರಿ ಕಾಮಗಾರಿಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಕ್ಕೆ ಪತ್ರ ಬರೆಯುವುದಾಗಿ ರೈತರಿಗೆ ಭರವಸೆ ನಡಿದರು.
ಈ ವೇಳೆ ಹೆಚ್ಚುವರಿ ಆರಕ್ಷಕ ಅಧೀಕ್ಷಕ ತಿಮ್ಮಯ್ಯ, ಡಿವೈಎಸ್ಪಿ ಶಾಂತಮಲ್ಲಪ್ಪ, ತಹಸೀಲ್ದಾರ್ ಚೇತನಾ ಯಾದವ್, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಪಾಲಹಳ್ಳಿ, ಬೊಮ್ಮೂರು ಅಗ್ರಹಾರ, ಕಾರೇಕುರ, ಬೆಳಗೊಳ ಸೇರಿದಂತೆ ಇತರೆ ಗ್ರಾಮಗಳ ನೂರಾರು ರೈತರು ಇದ್ದರು.