ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿರುವುದರಿಂದ ಈ ವರ್ಷ ಕಾಲುವೆಗೆ ಬೇಸಿಗೆ ಬೆಳೆಗೆ ನೀರು ಹರಿಸಿಲ್ಲ.
ಕುರುಗೋಡು: ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಅಖಿತ ಭಾರತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ಗೆಣಿಕೆಹಾಳು, ಕ್ಯಾದಿಗೆಹಾಳು ಮತ್ತು ಮುಷ್ಟಗಟ್ಟೆ ಗ್ರಾಮಗಳ ರೈತರು ಪಟ್ಟಣದ ಜೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿರುವುದರಿಂದ ಈ ವರ್ಷ ಕಾಲುವೆಗೆ ಬೇಸಿಗೆ ಬೆಳೆಗೆ ನೀರು ಹರಿಸಿಲ್ಲ. ಪರಿಣಾಮ ರೈತರು ಸಂಕಷ್ಟದಲ್ಲಿದ್ದಾರೆ. ಪಂಪ್‌ಸೆಟ್ ಆಧಾರಿತ ಭೂಮಿ ಹೊಂದಿದ ರೈತರು ಜೀವನ ನಿರ್ವಹಣೆಗಾಗಿ ಬೇಸಿಗೆ ಬೆಳೆಯಲು ಮುಂದಾಗಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಯಾಗದ ಪರಿಣಾಮ ಬೆಳೆ ಒಣಗುವ ಹಂತ ತಲುಪಿವೆ. ಕೂಡಲೇ ಏಳುತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ವಿಷಯದಲ್ಲಿ ಬೇಜವಾಬ್ದಾರಿ ತೋರಿದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಅನಿಯಮಿತ ವಿದ್ಯುತ್ ಲೋಡ್‌ಸೆಡ್ಡಿಂಗ್ ಮಾಡುತ್ತಿರುವುದರಿಂದ ತೋಟಗಾರಿಕೆ ಬೆಳೆ ಒಣಗುವ ಹಂತ ತಲುಪಿವೆ. ಸಮರ್ಪಕ ವಿದ್ಯುತ್ ದೊರೆಯದೆ ಪಂಪ್‌ಸೆಟ್ ಆಧಾರಿತ ಬೇಸಿಗೆ ಬೆಳೆಯೂ ಒಣಗುವ ಹಂತ ತಲುಪಿದೆ. ನಿರಂತರವಾಗಿ ಒಂಭತ್ತು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಜೆಸ್ಕಾಂ ಪ್ರಭಾರ ಎ.ಇ. ಮಹಮ್ಮದ್ ಹನೀಫ್ ಮಾತನಾಡಿ, ಸರ್ಕಾರದ ಆದೇಶದಂತೆ ನಿತ್ಯ ಏಳು ತಾಸು ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರೈತರ ಒಂಭತ್ತು ತಾಸು ಭೇಟಿಕೆಯನ್ನು ಇಲಾಖೆಯ ಮೇಲಧಿಕಾರಿಗೆ ಕಳುಹಿಸಲಾಗುವುದು ಎಂದರು.
ಗ್ರಾಮೀಣ ಭಾಗದ ಕೆಲವು ರೈತರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ಪಂಪ್‌ಸೆಟ್‌ಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಕಾರ್ಯಚರಣೆ ನಡೆಸಿ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಧಿಕೃತ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.
ರೈತರಾದ ಬಸವನ ಗೌಡ, ಬುಡ್ಡನ ಗೌಡ,ಜಡೇಶ ಗೌಡ, ಸಂಜೀವ ನಾಯಕ, ಗಾದಿಲಿಂಗ, ಶಿವಪುತ್ರ, ಪಂಪನಗೌಡ, ವೀರನಗೌಡ, ಜಂಉನಾಥ, ಎರೆಪ್ಪಗೌಡ, ಸುರೇಶ ಮತ್ತು ದೇವಣ್ಣ ಇದ್ದರು.
ಕುರುಗೋಡು ಪಟ್ಟಣದ ಜೆಸ್ಕಾಂ ಕಚೇರಿ ಎದುರು ನಿರಂತರ ವಿದ್ಯುತ್ ಪೂರೈಕೆಗಾಗಿ ಒತ್ತಾಯಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.