ಬರಗಾಲದ ಹಿನ್ನೆಲೆಯಲ್ಲಿ ಎಕರೆಗೆ 25 ಸಾವಿರ ರು. ಪರಿಹಾರಕ್ಕೆ ಬೇಡಿಕೆಮುಂಡರಗಿ: ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ತಾಲೂಕು ರೈತ ಸಂಘ ಅಧ್ಯಕ್ಷ ಶರಣಪ್ಪ ಕಂಬಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರು.ಗಳ ಪರಿಹಾರ ನೀಡಬೇಕು, ಬೆಳೆ ವಿಮೆಯನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು, ಕೃಷಿಗೆ ಸಂಬಂಧಿಸಿದ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು, ರೈತರ ಸಾಲಮನ್ನಾ ವಿಚಾರದಲ್ಲಿ ಪ್ರಧಾನಮಂತ್ರಿ ಹೆಚ್ಚಿನ ಮುತುರ್ವಜಿವಹಿಸಬೇಕು ಎಂದು ಒತ್ತಾಯಿಸಿದರು.
ಸರಕಾರ ಬರಗಾಲ ಘೋಷಣೆ ಮಾಡಿ ಎರಡು ತಿಂಗಳು ಕಳೆದರೂ ಸಹ ಇದುವರೆಗೂ ರೈತರಿಗೆ ಯಾವುದೇ ರೀತಿಯ ಪರಿಹಾರ ನೀಡುತ್ತಿಲ್ಲ. ಶೀಘ್ರದಲ್ಲಿಯೇ ರೈತರಿಗೆ ಪರಿಹಾರ ನೀಡುವಂತಾಗಬೇಕು. ಈಗಾಗಲೇ ಭೀಕರ ಬರಗಾಲ ಇರುವುದರಿಂದ ದನಗಳಿಗೆ ತಿನ್ನಲು ಹೊಟ್ಟು, ಮೇವು, ಕುಡಿಯಲು ನೀರಿಲ್ಲದೇ ತೊಂದರೆ ಅನುಭವಿಸುವಂತಾಗಿದ್ದು, ಕೂಡಲೇ ವ್ಯವಸ್ಥೆ ಮಾಡಬೇಕು.ರೈತರಿಗಾಗಿ ಸರಕಾರ ನೀಡುವ ಪರಿಹಾರ, ಬೆಳೆವಿಮೆ ಹಾಗೂ ವಿಧವಾ, ವೃದ್ಧಾಪ್ಯ ವೇತನವನ್ನು ರೈತರ ವಿವಿಧ ಸಾಲಕ್ಕೆ ಪಾವತಿ ಮಾಡಿಕೊಳ್ಳುತ್ತಿದ್ದು, ಅದನ್ನು ತಕ್ಷಣವೇ ನಿಲ್ಲಿಸಬೇಕು. ಮುಂಡರಗಿ ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರಿಗೆ ಕುಡಿಯುವ ನೀರಿಲ್ಲ, ರೈತರಿಗೆ ಎಲ್ಲ ರೀತಿಯ ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.