ಮನುಷ್ಯರ ಅಂಧಕಾರವನ್ನು ಕಳೆಯಲು ಗುರುಗಳ ಮಾರ್ಗದರ್ಶನದ ಅವಶ್ಯಕತೆ ಇದೆ. ಹಾಗಾಗಿ ಅನಕ್ಷರತೆಯಿಂದ ಹೊರಬಂದು, ಗುರು, ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಜನರಿಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ ಸತ್ಯ ಮತ್ತು ಅಸತ್ಯಗಳ ನಡುವಿನ ವ್ಯತ್ಯಾಸಗಳನ್ನು ಹಾಗೂ ಒಳಿತು ಮತ್ತು ಕೆಡಕುಗಳ ನಡುವಿನ ಭಿನ್ನತೆಯನ್ನು ತಿಳಿಸುವ ಶಕ್ತಿಕೇಂದ್ರಗಳು ಮಠಗಳಾಗಿವೆ ಎಂದು ಉಜ್ಜಿಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ದುಗ್ಗಾವತಿ ಗ್ರಾಮದ ಹಿರೇಮಠದ ಧರ್ಮಾಧಿಕಾರಿ ಲಿಂ. ಮಲ್ಲಿಕಾರ್ಜುನ ಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಠ, ಮಾನ್ಯಗಳು ಜನರ ಜೀವನ ಮಟ್ಟವನ್ನು ಧಾರ್ಮಿಕವಾಗಿ, ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸುಧಾರಿಸುವ ಕ್ಷೇತ್ರಗಳಾಗಿವೆ ಎಂದರು.
ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯರ ಅಂಧಕಾರವನ್ನು ಕಳೆಯಲು ಗುರುಗಳ ಮಾರ್ಗದರ್ಶನದ ಅವಶ್ಯಕತೆ ಇದೆ. ಹಾಗಾಗಿ ಅನಕ್ಷರತೆಯಿಂದ ಹೊರಬಂದು, ಗುರು, ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಅವರು ಲಿಂ. ಮಲ್ಲಿಕಾರ್ಜುನ ಸ್ವಾಮಿಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಮಘಟ್ಟ ಪುರವರ್ಗ ಮಠದ ರೇವಣಸಿದ್ದೇಶ್ವರ ಶ್ರೀಗಳು, ದುಗ್ಗಾವತಿ ಹಿರೇಮಠದ ವೀರಭದ್ರೇಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಹಿರೇಕುರುತ್ತಿ ಸಿದ್ದಿ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು, ನೀಲಗುಂದ ಮಠದ ಚನ್ನಬಸವ ಸ್ವಾಮೀಜಿ, ಅಡವಿಹಳ್ಳಿ ಮಠದ ವೀರಗಂಗಾಧರ ಸ್ವಾಮೀಜಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.