ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಸರ್ಕಾರದ ವಿವಿಧ ಯೋಜನೆಗಳಿಂದ ರೈತರ ಖಾತೆಗೆ ಜಮಾಗೊಂಡ ಹಣವನ್ನು ತಾಲೂಕಿನ ನಾಮಗೊಂಡ್ಲು ಕೆನರಾ ಬ್ಯಾಂಕ್ ಅಧಿಕಾರಿಗಳು ಸಾಲದ ಖಾತೆಗೆ ಕಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ, ರೈತರು,ವೃದ್ಧರು, ಮಹಿಳೆಯರು ಬ್ಯಾಂಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಶಾಖೆಯ ವ್ಯವಸ್ಥಾಪಕಿ ರಾಜ್ಯಲಕ್ಷ್ಮೀ ಖಾತೆದಾರರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಲ್ಲದೆ, ಕನ್ನಡದಲ್ಲಿ ಮಾತನಾಡುವುದನ್ನು ಬಿಟ್ಟು ತೆಲುಗು ಭಾಷೆಯಲ್ಲಿ ಮಾತನಾಡುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಬ್ಯಾಂಕ್ ಸಿಬ್ಬಂದಿ ವಿರುದ್ಧ ಆಕ್ರೋಶ:
ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ಸರ್ಕಾರ ಸಾಮಾಜಿಕ ಭದ್ರತೆ ಅಡಿಯಲ್ಲಿ ನೀಡುತ್ತಿರುವ ನರೇಗಾ, ಅನ್ನಭಾಗ್ಯ, ಗೃಹಲಕ್ಷ್ಮೀ ಮುಂತಾದ ಯೋಜನೆಗಳ ಹಣವು ರೈತರು ಜೀವನ ಸಾಗಿಸಲು ಆಧಾರವಾಗಿರುತ್ತದೆ. ಬ್ಯಾಂಕಿನಲ್ಲಿ ರೈತರು ತಮ್ಮ ಅವಶ್ಯಕತೆಗಾಗಿ ಹಸು ಮತ್ತು ಜಮೀನಿನ ಮೇಲೆ ಸಾಲವನ್ನು ಪಡೆದುಕೊಂಡಿರುತ್ತಾರೆ, ಆದರೆ ಬ್ಯಾಂಕಿನವರು ಸರ್ಕಾರದ ಯೋಜನೆಗಳ ಹಣವನ್ನು ರೈತರ ಸಾಲಕ್ಕೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೂ ಸಹ ದೂರು ನೀಡಲಾಗಿದೆ, ಜಿಲ್ಲಾಧಿಕಾರಿಗಳು ಬ್ಯಾಂಕಿನವರನ್ನು ಕರೆಸಿ ಮಾತನಾಡಿದ್ದರೂ ಸಮಸ್ಯೆ ಬಗೆ ಹರಿದಿರುವುದಿಲ್ಲ ಎಂದು ಹೇಳಿದರು.ಜಿಲ್ಲಾಧಿಕಾರಿಗಳು ಸರ್ಕಾರದ ಯೋಜನೆಗಳ ಹಣವನ್ನು ಸಾಲಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು ನಿರ್ದೇಶನ ನೀಡಿದ್ದರೂ ಸರ್ಕಾರದಿಂದ ಫಲಾನುಭವಿಗಳಿಗೆ ಬರುವ ಹಣವನ್ನು ಕಡಿತಗೊಳಿಸುತ್ತಿದ್ದಾರೆ. ಬ್ಯಾಂಕಿನ ಸಿಬ್ಬಂದಿ ನಿಮ್ಮ ಸಾಲಕ್ಕೆ ಕೇಂದ್ರ ಬ್ಯಾಂಕ್ನಿಂದಲೇ ಹಣ ಜಮಾವಣೆಯಾಗಿದೆ ಎಂದು ಹೇಳಿ ಕೈ ಚೆಲ್ಲಿದ್ದಾರೆ ಎಂದು ಆರೋಪಿಸಿದ್ದರು.
ಕೂಡಲೇ ರೈತರ, ಮಹಿಳೆಯರ, ವೃದ್ಧರ ಹಣವನ್ನು ಅವರ ಖಾತೆಗಳಿಗೆ ಜಮಾವಣೆಗೊಳಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದೆಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮೂಲಕ ಆಗ್ರಹಿಸಿದರು.ಮನವಿ ಸ್ವೀಕರಿಸಿದ ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ರಾಜಲಕ್ಷ್ಮೀ ಮಾತನಾಡಿ, ತಾಂತ್ರಿಕ ದೋಷದಿಂದ ಸರ್ಕಾರದ ಪಿಂಚಣಿ ಯೋಜನೆಯ ಹಣ ಫಲಾನುಭವಿಗಳು ಮಾಡಿರುವ ಸಾಲಕ್ಕೆ ಜಮಾವಣೆಯಾಗಿದೆ, ತಾಂತ್ರಿಕ ದೋಷ ಸರಿಪಡಿಸಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾವಣೆಗೊಳಿಸಲಾಗುವುದು, ಒಂದು ದಿನ ಕಾಲಾವಕಾಶ ನೀಡುವಂತೆ ರೈತರ ಸಂಘದ ಮುಖಂಡರಲ್ಲಿ ಕೋರಿದರು. ಇದಕ್ಕೆ ಸಮ್ಮತಿಸಿದ ರೈತ ಸಂಘದ ಮುಖಂಡರು ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಸನತ್ ಕುಮಾರ್, ಕಾರ್ಯದರ್ಶಿ ರಾಜಣ್ಣ, ಮುಖಂಡರಾದ ಶ್ರೀನಿವಾಸ್, ಹನುಮಂತರೆಡ್ಡಿ, ಬಾಲಕೃಷ್ಣ ರೆಡ್ಡಿ, ಕೃಷ್ಣಪ್ಪ, ರಾಹುಲಪ್ಪ, ನರಸಿಂಹ ರೆಡ್ಡಿ, ಮುಂತಾದವರು ಭಾಗವಹಿಸಿದ್ದರು.