ವಿಜಯನಗರ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆ

KannadaprabhaNewsNetwork | Updated : Jan 10 2024, 03:22 PM IST

ಸಾರಾಂಶ

ನೀರಿನ ಅಭಾವ ಇದ್ದರೂ ವಿಜಯನಗರ ಕಾಲುವೆಗಳಿಗೆ ನೀರು ಬಿಡಬಹುದಾಷ್ಟು ನೀರು ಇದೆ. ಕೇವಲ ವಿಜಯ ನಗರಕಾಲುವೆಗಳಿಗೆ ಪ್ರತಿದಿನ 60 ಕ್ಯುಸೆಕ್ ನೀರು ಬಿಡುಗಡೆ ಮಾಡಿದರೂ ನಮಗೆ ನೀರು ಸಾಕಾಗುತ್ತದೆ.

ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ಮಾಣವಾಗುವ ಮೊದಲು ಮತ್ತು ನಂತರ ಬಚಾವತ್ ತೀರ್ಪಿನ ಪ್ರಕಾರ ವಿಜಯನಗರ ಕಾಲುವೆಗಳಿಗೆ ನಿರಂತರ ನೀರು ಬಿಡಬೇಕು ಎನ್ನುವ ನಿಯಮ ಇದೆ. ಹಾಗಾಗಿ ನಿರಂತರ ನೀರು ಹರಿಸಬೇಕು ಎಂದು ಆಗ್ರಹಿಸಿ ಹುಲಿಗಿ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಮತ್ತು ರೈತರು ಬುಧವಾರ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ನೀರಿನ ಅಭಾವ ಇದ್ದರೂ ವಿಜಯನಗರ ಕಾಲುವೆಗಳಿಗೆ ನೀರು ಬಿಡಬಹುದಾಷ್ಟು ನೀರು ಇದೆ. ಕೇವಲ ವಿಜಯ ನಗರಕಾಲುವೆಗಳಿಗೆ ಪ್ರತಿದಿನ 60 ಕ್ಯುಸೆಕ್ ನೀರು ಬಿಡುಗಡೆ ಮಾಡಿದರೂ ನಮಗೆ ನೀರು ಸಾಕಾಗುತ್ತದೆ. 

ಹೀಗಿದ್ದರೂ ನಮಗೆ ನ್ಯಾಯಯುತವಾಗಿ ಬಿಡಬೇಕಾದ ನೀರು ಬಿಟ್ಟಿಲ್ಲ. ಹಾಗಾಗಿ ನೀರು ಬಿಡುವಂತೆ ಆಗ್ರಹಿಸಿ ಹೋರಾಟ ಆರಂಭಿಸಿದ್ದೇವೆ. ನೀರು ಬಿಡುವ ಆದೇಶವಾಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದ್ದಾರೆ. 

ಬಲದಂಡೆಗೆ ಹೆಚ್ಚುವರಿಯಾಗಿ ನೀರು ಬಿಡುಗಡೆ ಮಾಡಿದಾಗಲೂ ನಾವು ಆಕ್ಷೇಪ ವ್ಯಕ್ತಪಡಿಸಿದರೂ ನೀರು ಬಿಡಲಾಗಿದೆ. ಆದರೆ, ನಮಗೆ ಕೊಟ್ಟ ಭರವಸೆಯಂತೆ ನೀರು ಕೊಟ್ಟಿಲ್ಲವಾದ್ದರಿಂದ ನಾವು ಹೋರಾಟ ಆರಂಭಿಸಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಬಳಕೆದಾರರ ಸಂಘದ ಅಧ್ಯಕ್ಷ ಜನಾರ್ದನ ಹುಲಿಗಿ, ಗೌರೀಶ ಬಾಗೋಡಿ, ರಾಮನಗೌಡ ರಾಂಪುರ, ಜನಾದ್ರಿ ಲಿಂಗಪ್ಪ, ಗಾಳೆಪ್ಪ ಮೊದಲಾದವರು ಭಾಗವಹಿಸಿದ್ದರು.ನಮಗೆ ಅನ್ಯಾಯವಾಗುತ್ತಿದ್ದು, ಅದನ್ನು ಸರಿಪಡಿಸುವವರೆಗೂ ಹೋರಾಟ ಮಾಡುತ್ತೇವೆ. 

ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಸಂಗಣ್ಣ ಕರಡಿ ಸೇರಿದಂತೆ ಎಲ್ಲರೂ ಭಾಗವಹಿಸಬೇಕು. ಅವರು ಸಹ ಬಂದು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾರೆ ಎನ್ನುತ್ತಾರೆ ಹುಲಿಗಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಜನಾರ್ದನ ಹುಲಿಗಿ.

Share this article