ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರ ತಡೆಯುವ ಪರೀಕ್ಷೆ ನಡೆಸುವುದಕ್ಕಾಗಿ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ (ಡಾ। ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಈ ತಿಂಗಳ 16ರ ರಾತ್ರಿಯಿಂದ 19ರ ಬೆಳಗ್ಗೆವರೆಗೆ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.ರಾಜ್ಯದ 18 ಜಿಲ್ಲೆಗಳನ್ನು ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಂಡುವ ನಿಟ್ಟಿನಲ್ಲಿ ಭಾರ ತಡೆಯುವ ಪರೀಕ್ಷೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಎಐ) ಮುಂದಾಗಿದೆ. ಹೀಗಾಗಿ ಜ.16ರ ಮಂಗಳವಾರ ರಾತ್ರಿ 11 ಗಂಟೆಯಿಂದ ಜ.19ರ ಶುಕ್ರವಾರ ಬೆಳಗ್ಗೆ 11 ಗಂಟೆಯವರೆಗೆ ವಾಹನಗಳ ಓಡಾಟವನ್ನು ಸಂಚಾರ ವಿಭಾಗದ ಪೊಲೀಸರು ನಿಷೇಧಿಸಿದ್ದಾರೆ. ಪರ್ಯಾಯ ಮಾರ್ಗದಲ್ಲಿ ಸಾಗುವಂತೆ ಸಾರ್ವಜನಿಕರಿಗೆ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಮನವಿ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಪೀಣ್ಯ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಎನ್‌ಎಚ್‌ಎಐ ದುರಸ್ತಿ ಕೈಗೊಂಡಿತ್ತು. ಈ ದುರಸ್ತಿ ಕಾರಣಕ್ಕೆ ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದ ಪೊಲೀಸರು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದರು.ಪರ್ಯಾಯ ಮಾರ್ಗ ಹೀಗಿದೆ*ನೆಲಮಂಗಲದ ಕಡೆಯಿಂದ ಬೆಂಗಳೂರು ನಗರಕ್ಕೆ ಮೇಲ್ಸೇತುವೆ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಸಮೀಪದ ಎನ್‌ಎಚ್ ರಸ್ತೆ ಹಾಗೂ ಸರ್ವೀಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಮುಖಾಂತರ ಗೊರಗುಂಟೆಪಾಳ್ಯ ತಲುಪಬಹುದು.
*ಸಿಎಂಟಿಐ ಜಂಕ್ಷನ್‌ನಿಂದ ನೆಲಮಂಗಲ ಕಡೆಗೆ ಮೇಲ್ಸೇತುವೆ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆಜಿ ಟೋಲ್ ಕಂಪನಿ ಪಕ್ಕದ ಎನ್‌ಎಚ್ ಹಾಗೂ ಸರ್ವೀಸ್ ರಸ್ತೆಗಳಲ್ಲಿ ಎಸ್‌ಆರ್‌ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮುಖಾಂತರ ಸಾಗಬಹುದು.