ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Aug 24, 2024, 01:15 AM IST
23ಕೆಎಂಎನ್ ಡಿ23 | Kannada Prabha

ಸಾರಾಂಶ

ಲಕ್ಷಾಂತರ ಕ್ಯುಸೆಕ್ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದರೂ ನೀರು ನಿರ್ವಹಣೆ ತಿಳುವಳಿಕೆ ಇಲ್ಲದ ಅಸಮರ್ಥ ನೀರಾವರಿ ಅಧಿಕಾರಿಗಳು ಹಾಗೂ ಇಚ್ಛಾ ಶಕ್ತಿ ಇಲ್ಲದ ಜನಪ್ರತಿನಿಧಿಗಳಿಂದ ತಾಲೂಕಿನ ರೈತರು ವ್ಯವಸಾಯಕ್ಕೆ ನೀರಿನ ಬರ ಎದುರಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ತಾಲೂಕಿನ ದ್ಯಾವಪಟ್ಟಣ ಗ್ರಾಮದ ಹಂದಿಗೆರೆ ಸೇರಿದಂತೆ ಬಿ.ಜಿ.ಪುರ ಹೋಬಳಿಯ ರೈತರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪುರಸಭೆಯಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು, ತಾಲೂಕು ಕಚೇರಿ ಎದುರು ಧರಣಿ ನಡೆಸಿ ಕೆರೆ- ಕಟ್ಟೆಗಳಿಗೆ ನೀರು ತುಂಬಿಸಲು ವಿಫಲರಾಗಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಕೃಷ್ಣರಾಜಸಾಗರ ಜಲಾಶಯ ತುಂಬಿ ಎರಡು ತಿಂಗಳಾದರೂ ಸಹ ನಮ್ಮ ರೈತರ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ತಲುಪದೇ ಇನ್ನೂ ಸಹ ಕೃಷಿ ಚಟುವಟಿಕೆ ಪ್ರಾರಂಭವಾಗಿಲ್ಲ ಎಂದು ಕಿಡಿಕಾರಿದರು.

ಲಕ್ಷಾಂತರ ಕ್ಯುಸೆಕ್ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದರೂ ನೀರು ನಿರ್ವಹಣೆ ತಿಳುವಳಿಕೆ ಇಲ್ಲದ ಅಸಮರ್ಥ ನೀರಾವರಿ ಅಧಿಕಾರಿಗಳು ಹಾಗೂ ಇಚ್ಛಾ ಶಕ್ತಿ ಇಲ್ಲದ ಜನಪ್ರತಿನಿಧಿಗಳಿಂದ ತಾಲೂಕಿನ ರೈತರು ವ್ಯವಸಾಯಕ್ಕೆ ನೀರಿನ ಬರ ಎದುರಿಸುವಂತಾಗಿದೆ ಎಂದು ದೂರಿದರು.

ಕಾವೇರಿ, ಕಪಿಲಾ ಹಾಗೂ ಸ್ಫಟಿಕ ಸರೋವರ, ನದಿಗಳ ತ್ರಿವೇಣಿ ಸಂಗಮದ ಭಾಗವಾಗಿ ಹರಿಯುವ ನದಿ ನೀರು, ಬಿ.ಜಿ.ಪುರ ಹೋಬಳಿ ಹಳ್ಳಿಗಳ ಪಕ್ಕದಲ್ಲಿ ಹರಿದರೂ ಹೋಬಳಿಯ ರೈತರಿಗೆ ಯಾವೊಂದು ಪ್ರಯೋಜನವೂ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ಜಿ.ಪುರ ಹೋಬಳಿಗಳನ್ನು ಕೇಂದ್ರೀಕರಿಸಿ ಹಲವು ನೀರಾವರಿ ಯೋಜನೆಗಳಿದ್ದರೂ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ- ಕಟ್ಟೆಗಳಿಗೆ ನೀರಿಲ್ಲದಂತಾಗಿದೆ ಎಂದು ಕಿಡಿಕಾರಿದರು.

ಬಿ.ಜಿ.ಪುರ ಹೋಬಳಿ ಹಲವು ಕೆರೆ- ಕಟ್ಟೆಗಳಿಗೆ ನೀರು ತುಂಬಿಸುವ ಜವಾಬ್ದಾರಿ ಪೂರಿಗಾಲಿ ಹನಿ ಹಾಗೂ ತುಂತುರು ನೀರಾವರಿ ವ್ಯಾಪ್ತಿಗೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಬಿ.ಜಿ.ಪುರ ಹೋಬಳಿಯ ದ್ಯಾವಪಟ್ಟಣ ಗ್ರಾಮದ ಹಂದಿಗೆರೆಯೂ ಸೇರಿದಂತೆ ಇತರ ಎಲ್ಲಾ ಕೆರೆ- ಕಟ್ಟೆಗಳಿಗೂ ತಕ್ಷಣ ನೀರು ತುಂಬಿಸಬೇಕು ಹಾಗೂ ಮಾರೆಹಳ್ಳಿ ಕೆರೆಯಿಂದ ವಡ್ಡರಹಳ್ಳಿ, ನಾಗೇಗೌಡನ ದೊಡ್ಡಿ ನಾಲೆಗಳಿಗೆ ನೀರು ಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಬಿ.ಜಿ.ಪುರ ಹೋಬಳಿ ಅಧ್ಯಕ್ಷ ಗುರುಸ್ವಾಮಿ, ಕಾರ್ಯದರ್ಶಿ ಮಹದೇವಯ್ಯ ಹಾಗೂ ಹಲವು ರೈತರು ಇದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ