ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆದ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ಅವರು, ಮಂಡ್ಯ ವಿವಿ ಆಗಿ ರಚನೆಗೊಂಡ ನಂತರ ನಡೆಯುತ್ತಿರುವ ಪ್ರಥಮ ಘಟಿಕೋತ್ಸವ ಇದಾಗಿದ್ದು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಮತ್ತು ವಿಜೃಂಭಣೆಯಿಂದ ಆಯೋಜಿಸಬೇಕು ಎಂದರು.
ದಾನಿಗಳು ಸ್ಥಾಪಿಸಿರುವ ದತ್ತಿಗಳಿಂದ ಬಹುಮಾನಗಳನ್ನು ನೀಡುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಲಿದೆ. ಶೈಕ್ಷಣಿಕವಾಗಿಯೂ ನೆರವಾಗಲಿದೆ. ಸಾಕಷ್ಟು ದಾನಿಗಳು ದತ್ತಿ ನಿಧಿ ಸ್ಥಾಪಿಸಲು ಮುಂದೆ ಬರುತ್ತಾರೆ. ಅಂತಹವರ ನೆರವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.2,102 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ:
ಅಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರ್‍ಯಾಂಕ್‌ಗಳನ್ನು ಪ್ರದಾನ ಮಾಡಲು ಮೈಸೂರು ವಿ.ವಿ. ಅಳವಡಿಸಿಕೊಂಡಿರುವ ನಿಯಮಗಳನ್ನೇ ಮಂಡ್ಯ ವಿ.ವಿ.ಯಲ್ಲೂ ಅಳವಡಿಸಿಕೊಳ್ಳಲು ಹಾಗೂ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಎಲ್ಲಾ ದತ್ತಿಗಳನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿರುವುದರಿಂದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವಾಗಿ ಘಟಿಕೋತ್ಸವದಲ್ಲಿ ಪ್ರದಾನ ಮಾಡುವುದಕ್ಕೆ ಅನುಮೋದನೆ ಕೋರಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಅನುಮೋದಿಸಿತು.
ವಿವಿ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ಮಂಡ್ಯ ವಿವಿಯು ಸಂಯೋಜಿತ ವಿ.ವಿ. ಆಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮೊದಲನೇ ವರ್ಷದ ವಿದ್ಯಾರ್ಥಿಗಳು ಮಾತ್ರ ಮಂಡ್ಯ ವಿವಿ ವ್ಯಾಪ್ತಿಗೆ ಬರುತ್ತಾರೆ ಮತ್ತು 2024- 25ನೇ ಶೈಕ್ಷಣಿಕ ಸಾಲಿನಿಂದ ಮೊದಲನೇ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಬರುವುದರಿಂದ ಮಾಂಡವ್ಯ ವಲಯ ಕ್ರೀಡಾಕೂಟ ಆಯೋಜಿಸುವ ಸಂಬಂಧ ದೈಹಿಕ ಶಿಕ್ಷಣ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆಯ ಅನುಮೋದನೆ ಕೋರಿದರು. ಇದಕ್ಕೆ ಸಭೆ ಒಪ್ಪಿತು.
ಕುಲಸಚಿವ (ಆಡಳಿತ) ಡಾ.ಶಿವಚಿತ್ತಪ್ಪ, ಹಣಕಾಸು ಅಧಿಕಾರಿ ಡಾ.ಪಿ.ಮನೋಹರ್, ಸಿಂಡಿಕೇಟ್ ಸದಸ್ಯರಾದ ಡಾ.ಎಸ್.ಎಲ್.ಸುರೇಶ್, ಸಿ.ಜಯರಾಮು, ಕೆ.ಶಿವಶಂಕರ್, ಬಿ.ರಾಜಣ್ಣ, ಕೆ.ಟಿ. ಅಪ್ಪಾಜಪ್ಪ, ಎಂ.ಸಿ.ಸತೀಶ್ ಬಾಬು ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.
ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಮಂಡ್ಯ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ಆಧಾರಿತ ಹೊಸ ಹೊಸ ಕೋರ್ಸ್ ಗಳನ್ನು ಆರಂಭಿಸಬೇಕು. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಬೇಕು ಎಂದು ಮಂಡ್ಯ ವಿವಿ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರೂ ಆದ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ಹೇಳಿದರು.