೪೦ ದಿನದಿಂದ ರೈತರ ಧರಣಿ: ಜಿಲ್ಲಾಡಳಿತ ನಿರ್ಲಕ್ಷ್ಯ

KannadaprabhaNewsNetwork |  
Published : Oct 03, 2026, 01:30 AM IST
೪೦ ದಿನಗಳಿಂದ ಅಹೋ ರಾತ್ರಿ ರೈತರಪ್ರತಿಭಟನೆ | Kannada Prabha

ಸಾರಾಂಶ

ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಕಳೆದ ೪೦ ದಿನಗಳಿಂದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಪ್ರತಿಭಟನೆ ನಿಲ್ಲಿಸದಿರುವುದು ಜಿಲ್ಲಾಡಳಿತಕ್ಕೆ ಕಪ್ಪು ಚುಕ್ಕೆಯಾಗಿದೆ!

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಕಳೆದ ೪೦ ದಿನಗಳಿಂದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಪ್ರತಿಭಟನೆ ನಿಲ್ಲಿಸದಿರುವುದು ಜಿಲ್ಲಾಡಳಿತಕ್ಕೆ ಕಪ್ಪು ಚುಕ್ಕೆಯಾಗಿದೆ!

ಕಳೆದ ೪೦ ದಿನಗಳಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ರೈತಸಂಘದ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ,ರಸ್ತೆತಡೆ,ಬಾರ್‌ ಕೋಲ್‌ ಚಳುವಳಿ,ಮಕ್ಕಳ ಚಳುವಳಿ ನಡೆಸಿದ್ದಾರೆ.ರೈತರ ಬೇಡಿಕೆ ಈಡೇರಿಕೆಗೆ ಮಲಗಿರುವ ಜಿಲ್ಲಾಡಳಿತಕ್ಕೆ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ ಜಿಲ್ಲಾಡಳಿತ ಮಾತ್ರ ರೈತರ ಪ್ರತಿಭಟನೆ ನಿಲ್ಲಿಸಲು ಸಾದ್ಯವಾಗಿಲ್ಲ.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶ್ರೀರೂಪ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು,ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಆದರೆ ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಇಂಥ ದಿನ ನೀರು ಬಿಡಿಸುತ್ತೇವೆ ಎಂದು ಹೇಳಿಲ್ಲ. ಹಲವು ದಶಕಗಳಿಂದಲೂ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ನೀಡುವ ಬಗ್ಗೆಯೂ ಅರಣ್ಯ ಹಾಗೂ ಕಂದಾಯ ಇಲಾಖೆ ಸ್ಪಷ್ಟವಾದ ಭರವಸೆ ನೀಡುವಲ್ಲಿಯೂ ಸಂಪೂರ್ಣ ವಿಫಲವಾಗಿದೆ ಜಿಲ್ಲಾಡಳಿತ.

ಬಿಜೆಪಿ ಬೆಂಬಲ:

ರೈತಸಂಘದ ಕಾರ್ಯಕರ್ತರು ನಡೆಸುತ್ತಿರುವ ಅಹೋ ರಾತ್ರಿ ಪ್ರತಿಭಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ಬೆಂಬಲ ನೀಡಿದ್ದಾರೆ.

ಗಾಂಧಿ ಆಶಯ ಈಡೇರುತ್ತಿಲ್ಲ:

ಸರ್ಕಾರಗಳು ರೈತರು ಹಾಗೂ ಜನ ಸಾಮಾನ್ಯರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗುತ್ತಿಲ್ಲ. ಇತ್ತ ಮಹಾತ್ಮ ಗಾಂಧಿ ಅವರ ಆಶಯಗಳು ಈಡೇರಿಸಲಾಗದ ಮೇಲೆ ಗಾಂಧಿ ಜಯಂತಿ ಆಚರಣೆ ಮಾಡಿ ಏನು ಪ್ರಯೋಜನ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಪ್ರಶ್ನಿಸಿದ್ದಾರೆ.

ಪಟ್ಟಣದ ಪುರಸಭೆ ಆವರಣದಲ್ಲಿ ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ರೈತಸಂಘದ ಕಾರ್ಯಕರ್ತರು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಪಟ್ಟಣದಲ್ಲಿ ಗಾಂಧಿ ಟೋಪಿ ಧರಿಸಿ ಗಾಂಧಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದರು.

ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಷ್ಟ್ರಪಿತ ಗಾಂಧಿ ಜಯಂತಿ ಆಚರಣೆ ಮಾಡಿದರೆ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಈಡೇರಿಸುವುದಿಲ್ಲ ಎಂದು ಹೇಳಿದರು.

ರೈತಸಂಘದ ಅಧ್ಯಕ್ಷ ಮಲ್ಲಯ್ಯನಪುರ ಶಿವಣ್ಣ,ಪ್ರಧಾನ ಕಾರ್ಯದರ್ಶಿ ಪ್ರಸಾದ್‌, ಮುಖಂಡರಾದ ರಘು, ಸುಭಾಷ್‌, ಬಸಮ್ಮ, ಚಿಕ್ಕಸಿದ್ದಮ್ಮ, ನೀಲಮ್ಮ, ನಾಗಮ್ಮ, ಮರಳಾಪುರ ಮಂಜು, ಪುಟ್ಟೇಗೌಡ, ಚಂದ್ರು, ಗಂಗಾಧರ್‌, ರವಿಚಂದ್ರ, ಕುಮಾರ್‌ ಹಲವರು ಇದ್ದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ಪ್ರತಿಭಟನೆಗಳು, ಚಳವಳಿಗಳಾಗಿವೆ. ಚಳವಳಿಗಳಿಂದಲೇ ಬಹಳಷ್ಟು ಬದಲಾವಣೆ ಆಗಿದೆ. ಇವತ್ತು ಚಳುವಳಿಗಳಿಗೆ ನೀವು ಗೌರವ ಕೊಡುತ್ತಿಲ್ಲ? ರೈತರ ನ್ಯಾಯಯುತವಾದ ಭರವಸೆಗಳಿಗೆ ಸ್ಪಷ್ಟ ಉತ್ತರ ಕೊಟ್ಟಿಲ್ಲ ಎಂದ್ಮೇಲೆ ಜಿಲ್ಲೆಯಲ್ಲಿ ಆಡಳಿತವೂ ಕುಸಿದಿದೆ ಎಂದರ್ಥ.

ಶಿವಪುರ ಮಹದೇವಪ್ಪ ಜಿಲ್ಲಾಧ್ಯಕ್ಷ, ರೈತಸಂಘ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಾಭಿವೃದ್ಧಿಯೇ ಗ್ರಾಮ ಸ್ವರಾಜ್ಯದ ಆಶಯ: ಸಚಿವ ಸಿ.ಪುಟ್ಟರಂಗಶೆಟ್ಟಿ
ಪುರಸಭೆಯಲ್ಲಿ ಎಸ್.ಶರವಣ ಸ್ವಚ್ಛತಾ ಪ್ರತಿಜ್ಞಾ ವಿಧಿ