ಹಾವೇರಿ: ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿ, ಕ್ವಿಂಟಲ್‌ಗೆ ₹3 ಸಾವಿರ ದರ ನಿಗದಿ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಮುಖಂಡರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಮೂರನೇ ದಿನವನ್ನು ಪೂರೈಸಿತು.
ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಳೆದ ಮೂರು ದಿನಗಳಿಂದ ಜಿಲ್ಲಾ ರೈತ ಸಂಘವು ಮೆಕ್ಕೆಜೋಳಕ್ಕೆ ಮೂರು ಸಾವಿರ ರು. ದರ ನಿಗದಿ ಹಾಗೂ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಸರ್ಕಾರದ ಪರವಾಗಿ ಯಾರೊಬ್ಬರೂ ಬಾರದಿರುವುದು ದುರ್ದೈವದ ಸಂಗತಿ. ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಂಬಲ ಬೆಲೆ ಸಿಗದೇ ಪರದಾಡುತ್ತಿದ್ದರೂ, ಈ ಸರ್ಕಾರಕ್ಕೆ ಮುಖ್ಯಮಂತ್ರಿ ಕುರ್ಚಿ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿಲ್ಲ. ಅಧಿಕಾರದ ದುರಾಸೆಗೆ ಬಿದ್ದಿರುವ ಸರ್ಕಾರಕ್ಕೆ ರೈತರ ಸಂಕಷ್ಟ ಕೇಳುತ್ತಿಲ್ಲ. ಈ ಸರ್ಕಾರಗಳು ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿವೆ. ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾದರೆ ರೈತರೆಲ್ಲ ಒಂದಾಗಬೇಕು. ನಮ್ಮ ಸಮಸ್ಯೆ ಬಗೆಹರಿಯುವ ತನಕ ಪ್ರತಿಭಟನೆ ನಿಲ್ಲಿಸದೇ ಹೋರಾಟ ಮಾಡೋಣ ಎಂದರು.ರೈತರ ಮೂರನೇ ದಿನದ ಪ್ರತಿಭಟನೆಗೆ ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ, ವಿವಿಧ ಮಹಿಳಾ ಸಂಘಟನೆಯವರು ಬೆಂಬಲ ನೀಡಿದ್ದರು. ಮುಖಂಡರಾದ ಮಾಲತೇಶ ಪೂಜಾರ, ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಮರಿಗೌಡ್ರ ಪಾಟೀಲ, ಪ್ರಭುಗೌಡ ಪ್ಯಾಟಿ, ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಶಂಕ್ರಣ್ಣ ಶಿರಗಂಬಿ, ಅಡಿವೆಪ್ಪ ಆಲದಕಟ್ಟಿ, ರುದ್ರಗೌಡ ಕಾಡನಗೌಡ್ರ, ದಿಳ್ಳೆಪ್ಪ ಮಣ್ಣೂರ, ಮುತ್ತಪ್ಪ ಗುಡಗೇರಿ ಹಾಗೂ ಅನೇಕ ರೈತರು ಪಾಲ್ಗೊಂಡಿದ್ದರು.
ಹೋರಾಟ ತೀವ್ರಗೊಳಿಸುವ ಕುರಿತು ಚರ್ಚೆ: ಕಳೆದ ಮೂರು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಸಮಸ್ಯೆ ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಗುರುವಾರ ಬೆಳಗ್ಗೆ 10ಕ್ಕೆ ರೈತ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಹೋರಾಟ ತೀವ್ರಗೊಳಿಸುವ ಕುರಿತು ಚರ್ಚೆ ನಡೆಸುತ್ತೇವೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.