ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬಂದ್‌ಗೆ ಬೆಂಬಲ ಸೂಚಿಸಿದ ಸ್ವಾಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ಜಿ.ಬಿ. ವಿನಯಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಭಟನೆಯ ಆರಂಭದಲ್ಲಿಯೇ ರೈತರ ಬೇಡಿಕೆ ಮತ್ತು ಬಂದ್‌ಗೆ ಬೆಂಬಲ ಸೂಚಿಸಿ ಮಾತನಾಡಿದರು.
ಜಿ.ಬಿ. ವಿನಯಕುಮಾರ್ ಮಾತನಾಡಿ, ಇದು ಕೃತಕ ಕ್ಷಾಮ, ಇಲ್ಲಿ ನೀರಿಗೆ ಬರ ಇಲ್ಲ. ಆದರೂ ನೀರು ಲಭ್ಯವಿಲ್ಲ. ರೈತರು ಮಳೆ ಕೊರತೆಯಿಂದ ಭತ್ತ ಬೆಳೆಯಲು ಸಾಧ್ಯವಾಗಲಿಲ್ಲ. ಒಂದಿಷ್ಟು ಮೆಕ್ಕೆಜೋಳ ಬೆಳೆ ಬೆಳೆದಿದ್ದಾರೆ. 400 ರಿಂದ 500 ಎಕರೆಯಷ್ಟು ರೈತರು ಅಡಕೆ ತೋಟಗಳನ್ನು ಕಟ್ಟಿಕೊಂಡು, ಒಣಗುತ್ತಿರುವ ಮರಗಳನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಧುಮಿಕಿದ್ದಾರೆ. ರೈತರ ಕೂಗು ಅಧಿಕಾರಿಗಳ ಮತ್ತು ಸರ್ಕಾರದ ಕಿವಿ ಮುಟ್ಟಬೇಕು. ಈ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕು. ಆಗಲೇ ನಿಮ್ಮ ಬೇಡಿಕೆಗಳು ಈಡೇರಲು ಸಾಧ್ಯ ಎಂದರು.ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ, ರೈತರಿಗೆ ನೀಡು ಕೊಡುತ್ತಿಲ್ಲ. ವಿಳಂಬ ಏಕೆ ಎಂದು ಅರ್ಥವಾಗುತ್ತಿಲ್ಲ, ಸರ್ಕಾರ ತನ್ನ ನೂರು ದಿನದ ಸಾಧನೆಗೆ ಚಿತ್ರದುರ್ಗದ ಭಾಗಕ್ಕೆ ಕುಡಿಯಲು ನೀರು ಬಿಟ್ಟಿದ್ದಾರೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಹತ್ತಾರು ವರ್ಷಗಳ ಕಾಲ ಹರಿಸಿದ ಶ್ರಮಕ್ಕೆ ನಮಗೆ ನೀರು ಬೇಕು. ಸರ್ಕಾರದ್ದು ಸಾಧನೆಯಾದರೆ ನಮ್ಮದು ಶ್ರಮ, ರೈತರ ತೋಟಗಳು ಎಷ್ಟು ಒಣಗುತ್ತೋ ಅಷ್ಟು ಸಿಟ್ಟು ಜಾಸ್ತಿಯಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ. ಸರ್ಕಾರ ಜನರನ್ನು ಕಂಟ್ರೋಲ್ ಮಾಡೋದಕ್ಕೆ ಫೋರ್ಸ್ ತರಬಾರದು, ನೀರು ತರಬೇಕು ಎಂದರು.
ಬಯಲುಸೀಮೆ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ನಾನೂ ಒಬ್ಬ ರೈತ, ನನಗೆ ಅಧಿಕಾರ ಮುಖ್ಯವಲ್ಲ, ನಮ್ಮ ತಾಲೂಕಿನ ರೈತರ ಪರ ನಾನೂ ಇರುತ್ತೇನೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೇಡಿಕೆ ಸಮಂಜಸವಾಗಿದೆ. ಈಗಾಗಲೇ ಸಚಿವರೊಂದಿಗೆ ಮಾತನಾಡಿದ್ದೇನೆ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರು, ನಮ್ಮ ಶಾಸಕರು ಮತ್ತು ಅಧಿಕಾರಿ ವರ್ಗ ಸಭೆ ಸೇರಿ ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಸಚಿವರಿಗೆ ಮನವರಿಕೆ ಮಾಡಿಕೊಡುತ್ತೇವೆ. ತಿಂಗಳಿಗೆ 15 ದಿನಗಳವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಭರವಸೆ ನೀಡಿದರು.
ಈ ನಡುವೆ ಎಚ್.ಬಿ. ಮಂಜಪ್ಪ ಅವರಿಗೆ ಫೋನ್ ಮಾಡಿದ ಸಚಿವರು, ಇನ್ನೆರಡು ದಿನಗಳಲ್ಲಿ ಭದ್ರಾ ಜಲಾಶಯದಿಂದ ನೀರು ಕೊಡುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳೊಂದಿಗೆ ಮಾತನಾಡಿದ್ದೇನೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದನ್ನು ಸ್ಪೀಕರ್ ಇಟ್ಟು ಸಭೆಯಲ್ಲಿದ್ದ ರೈತರಿಗೆ ಕೇಳಿಸಿದರು. ಮಾತು ಮುಂದುವರಿಸಿದ ಶಾಸಕರು, ಈಗ ಮಂತ್ರಿಗಳು ಹೇಳಿದ್ದನ್ನು ನಾನು ಫಾಲೋ ಮಾಡುತ್ತೇನೆ. ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ನೆಲಹೊನ್ನೆ ದೇವರಾಜ್, ಮೋಹನ್, ಕುಂಬಳೂರು ವಾಗೀಶ್, ಯಕ್ಕನಹಳ್ಳಿ ಜಗದೀಶ್, ಎಂ.ಜಿ.ಆರ್. ಮಂಜುನಾಥ್, ದಯಾನಂದ್, ತಿಮ್ಮೇನಹಳ್ಳಿ ಹನುಮಂತಪ್ಪ, ರಾಜಶೇಖರ್, ರವಿಕುಮಾರ್, ಎಚ್.ಎ. ಗದ್ದಿಗೇಶ್ ಸೇರಿದಂತೆ ಸಾವಿರಾರು ಜನ ರೈತರು ಭಾಗಿಯಾಗಿದ್ದರು.
-13ಎಚ್.ಎಲ್.ಐ1: