ತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯದ ರೈತರ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುವ ಜೊತೆಗೆ ಬೆಳೆ ನಷ್ಟಕ್ಕೀಡಾದ ರೈತರಿಗೆ ವೈಜ್ಞಾನಿಕ ಪರಿಹಾರ, ಬೆಳೆ ವಿಮೆ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿ, ಸಾಲ ಮನ್ನಾ ಘೋಷಣೆ ಮಾಡಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದ್ದಾರೆ.

- ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ, ಬೆಳೆವಿಮೆ ವ್ಯವಸ್ಥೆ ಪರಿಣಾಮಕಾರಿ ಜಾರಿಗೊಳಿಸಲು ಒತ್ತಾಯ । ರೈತ ಹುತಾತ್ಮರ ದಿನಾಚರಣೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯದ ರೈತರ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುವ ಜೊತೆಗೆ ಬೆಳೆ ನಷ್ಟಕ್ಕೀಡಾದ ರೈತರಿಗೆ ವೈಜ್ಞಾನಿಕ ಪರಿಹಾರ, ಬೆಳೆ ವಿಮೆ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿ, ಸಾಲ ಮನ್ನಾ ಘೋಷಣೆ ಮಾಡಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.

ತಾಲೂಕಿನ ಆನಗೋಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ಹುತಾತ್ಮ ರೈತರ ಸ್ಮಾರಕ ಬಳಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಹಾಗೂ ಜಿಲ್ಲೆಯ ವಿವಿಧ ರೈತ ಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ದಿವಂಗತ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ಧನೂರು ನಾಗರಾಜಾಚಾರ್‌ ಅವರ 34ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯಲ್ಲಿ ರೈತ ಹುತಾತ್ಮರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ರೈತರ ಕಣ್ಣೀರೊರೆಸುವ ಕೆಲಸ ಕೇಂದ್ರ ಸರ್ಕಾರದಿಂದ ಆಗಬೇಕು ಎಂದರು.

ಮೆಕ್ಕೆಜೋಳ, ರಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿವೆ. ತೀವ್ರ ಬರದ ಹಿನ್ನೆಲೆ ರಾಜ್ಯದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಗಿ, ಮೆಕ್ಕೆಜೋಳ ಸೇರಿದಂತೆ ಬೆಳೆಗಳನ್ನು ಬೆಳೆದರೂ ಕೈಗೆ ಬರುತ್ತಿಲ್ಲ. ಕೈಗೆ ಬಂದ ಬೆಳೆಗಳಿಗೆ ಸೂಕ್ತ ಬೆಲೆ, ಮಾರುಕಟ್ಟೆಯೂ ಸಿಗುತ್ತಿಲ್ಲ. ರೈತರು ಹಾಕಿದ ಬಂಡವಾಳ, ಸುರಿಸಿದ ಬೆವರಿಗೂ ಬಿಡಿಗಾಸು ಸಹ ಸಿಗದ ಸ್ಥಿತಿ ಇದೆ. ಸೂಕ್ತ ಬೆಲೆ, ಮಾರುಕಟ್ಟೆ, ಬೆಳೆ ನಷ್ಟದ ವೇಳೆ ಪರಿಹಾರ ದೊರೆಯದಿದ್ದರೆ ರೈತರ ಬದುಕು ಮತ್ತಷ್ಟು ದುಸ್ತರ, ದಯನೀಯ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಶಕಗಳ ಹಿಂದೆ ಆನಗೋಡು ಬಳಿ ರಸಗೊಬ್ಬರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ರೈತರು ತೀವ್ರ ಸ್ವರೂಪದ ಹೋರಾಟ ನಡೆಸಿದ್ದರು. ಆಗ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ರೈತರಾದ ಕಲ್ಲಿಂಗಪ್ಪ, ನಾಗರಾಜಾಚಾರ್‌ ಹುತಾತ್ಮರಾಗಿದ್ದರು. ಇಂತಹ ರೈತ ಹುತಾತ್ಮರ ತ್ಯಾಗ, ಬಲಿದಾನವನ್ನು ನಾವೆಂದಿಗೂ ಮರೆಯಬಾರದು. ನಾಡಿಗೆ ಅನ್ನ ನೀಡುವ ರೈತರು ದೈವಸಮಾನ. ರೈತರನ್ನು ಗೌರವಿಸುವ ಜೊತೆಗೆ ಸಂಕಷ್ಟದ ವೇಳೆ ಅನ್ನದಾತರ ಬೆನ್ನಿಗೆ ಎಲ್ಲರೂ ನಿಲ್ಲಬೇಕು ಎಂದು ಮನವಿ ಮಾಡಿದರು.

ಸಮಿತಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಮಾತನಾಡಿ, 33 ವರ್ಷದಿಂದ ರೈತ ಹುತಾತ್ಮರ ಸ್ಮರಣೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಪ್ರಸ್ತುತ ರೈತರ ಪರಿಸ್ಥಿ ತಿ ಹೇಳತೀರದು. ಮಳೆ, ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಯಾವೊಬ್ಬ ರಾಜಕಾರಣಿಗಳೂ ರೈತರಿಗೆ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತಿಲ್ಲ. ಸರ್ಕಾರಿ ಅಧಿಕಾರಿಗಳು ರೈತರ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ. ದೇವರೇ ನಮ್ಮನ್ನು ಕಾಪಾಡಬೇಕಿದೆ. ಇನ್ನಾದರೂ ದೇವರು ಒಳ್ಳೆಯ ಮಳೆ, ಬೆಳೆ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇವೆ ಎಂದರು.

ರೈತ ಮುಖಂಡರಾದ ಆವರಗೆರೆ ರುದ್ರಮುನಿ, ಶಾಬನೂರು ಎಚ್.ಆರ್. ಲಿಂಗರಾಜ, ಹೊನ್ನೂರು ಮುನಿಯಪ್ಪ, ರಾಜಶೇಖರ, ಬುಳ್ಳಾಪುರ ಹನುಮಂತಪ್ಪ, ಚನ್ನಬಸಪ್ಪ, ಮೋಹನ್, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಹಲ್ದಿ ಬಸವರಾಜ, ಬುಳ್ಳಾಪುರ ರೇವಣ್ಣ, ಆನಗೋಡು ಸಿದ್ದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ. ಚಂದ್ರಶೇಖರ್, ಆನಗೋಡು ಕರಿಬಸಪ್ಪ, ಬಸಣ್ಣ, ಪ್ರಕಾಶ, ನಸ್ರುಲ್ಲಾ, ರವಿ, ಹೇರಳಪ್ಪ, ಹೆಬ್ಬಾಳು ರುದ್ರಮುನಿ, ರೈತರು, ಸಂಘಟನೆಗಳ ಪದಾಧಿಕಾರಿಗಳು, ಹುತಾತ್ಮ ರೈತರ ಕುಟುಂಬ ಸದಸ್ಯರು, ಗ್ರಾಮಸ್ಥರು ಇದ್ದರು.

- - -

(ಕೋಟ್‌)

* ಕೇಂದ್ರ ಸರ್ಕಾರ ರೈತರಿಗೆ ಸ್ಪಂದಿಸಲಿ

ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ರೈತರಿಗಾಗಿ ₹72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಅದೇ ರೀತಿ ಈಗಿನ ಸಂಕಷ್ಟ ವೇಳೆ ಕೇಂದ್ರ ಸರ್ಕಾರ ರೈತರ ಸಾಲದ ಹೊರೆಯನ್ನು ಕಡಿಮೆ ಮಾಡಬೇಕು. ರೈತರ ನೋವಿಗೆ ಸ್ಪಂದಿಸಬೇಕು. ಸಾಲದ ಹೊರೆ, ಬೆಳೆ ನಷ್ಟ ಹಾಗೂ ಮಾರುಕಟ್ಟೆ ಸಮಸ್ಯೆ, ಸಂಕಷ್ಟದಲ್ಲಿರುವ ರೈತರಿಗೆ ಆಸರೆ ಆಗಬೇಕು. ರೈತ ಹೋರಾಟದಲ್ಲಿ ಹುತಾತ್ಮರಾದ ಕುಟುಂಬಗಳ ಜೀವನಕ್ಕೆ ಆಸರೆ ಆಗುವಂತೆ ಹಸುಗಳನ್ನು ಕಲ್ಪಿಸುತ್ತೇವೆ. ಆ ಕುಟುಂಬಗಳ ಬದುಕಿಗೆ ಅಗತ್ಯ ಸಹಕಾರ ನೀಡುವುದು ಸಮಾಜದ ಜವಾಬ್ದಾರಿ ಎಂದು ಸಚಿವ ಬಸವಂತಪ್ಪ ತಿಳಿಸಿದರು.

- - -

-ಫೋಟೋ ಇದೆ.