ಚಿಕಾಗೋದ ವಿವೇಕಾನಂದ ಸ್ಪಿರಿಚ್ಯುಯಲ್‌ ಸೆಂಟರ್‌ನಲ್ಲಿ ತರಳಬಾಳು ಶ್ರೀ ಉಪನ್ಯಾಸ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಜಾಗತಿಕವಾಗಿ ನಡೆಯುತ್ತಿರುವ ಹಲವು ಸಾಮಾಜಿಕ ಸಂಘರ್ಷಗಳಿಗೆ ಮನುಷ್ಯನ ಒಳಗಿರುವ ಅಸಹನೆಗಳೇ ಕಾರಣವಾಗಿವೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಶ್ರೀಗಳು ಚಿಕಾಗೋದ ವಿವೇಕಾನಂದ ಸ್ಪಿರಿಚ್ಯುಯಲ್‌ ಸೆಂಟರ್‌ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಜಗತ್ತಿನ ವಿವಿಧೆಡೆ ಹಲವು ಸಂಘರ್ಷಗಳು ನಡೆಯುತ್ತಿವೆ. ಇವುಗಳಿಗೆ ಧರ್ಮವನ್ನೇ ಮೂಲವನ್ನಾಗಿ ಮಾಡಲಾಗುತ್ತಿದೆ. ಧರ್ಮದ ಬದಲಿಗೆ ಮನುಷ್ಯನೊಳಗಿನ ಅಹಂಕಾರ, ಆಸೆ, ದ್ವೇಷ, ಅಸಹಿಷ್ಣುತೆಗಳೇ ಕಾರಣವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ವಿವೇಕಾನಂದರು ಚಿಕಾಗೋದಲ್ಲಿ ನೀಡಿದ ಸಂದೇಶ ಕೇವಲ ಧಾರ್ಮಿಕ ಭಾಷಣವಾಗಿರಲಿಲ್ಲ. ಅದು ಮನುಷ್ಯರನ್ನು ಧರ್ಮ, ಜಾತಿ, ದೇಶ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಒಂದೇ ಮಾನವ ಕುಟುಂಬದ ಸದಸ್ಯರನ್ನಾಗಿ ನೋಡುವ ವಿಶಾಲ ದೃಷ್ಟಿಕೋನ ಹೊಂದಿತ್ತು ಎಂದರು.

ಜಗತ್ತಿನ ಹಲವು ರಾಷ್ಟ್ರಗಳ ನಡುವೆ, ಸಮುದಾಯಗಳ ನಡುವೆ ಸಂಘರ್ಷಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೇವಲ ಕಾನೂನು, ಶಕ್ತಿ ಮತ್ತು ರಾಜಕೀಯ ಒಪ್ಪಂದಗಳಿಂದ ಶಾಶ್ವತ ಪರಿಹಾರ ಸಿಗಲಾರದು. ಆದ್ದರಿಂದ ವಿಶ್ವಶಾಂತಿಯ ಚರ್ಚೆ ಆರಂಭವಾಗಬೇಕಾದ್ದು ರಾಷ್ಟ್ರಗಳ ಗಡಿಗಳಲ್ಲಿ ಅಲ್ಲ, ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನೊಳಗಿನಿಂದ. ಮನುಷ್ಯನ ಮನಸ್ಸಿನಲ್ಲಿ ಪರಿವರ್ತನೆಯಾದರೆ ಎಲ್ಲವನ್ನೂ ಸುಧಾರಿಸಬಹುದು ಎಂದು ಶ್ರೀಗಳು ತಿಳಿಸಿದರು.

ಹೊರಗಿನ ಶತ್ರುಗಳನ್ನು ಗೆಲ್ಲುವುದಕ್ಕಿಂತ ಮೊದಲು ಮನುಷ್ಯ ತನ್ನ ದುರ್ಬಲತೆಗಳನ್ನು ಗೆಲ್ಲಬೇಕು. ತನ್ನ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದ ವ್ಯಕ್ತಿಗೆ ಹೊರಗಿನ ಅನೇಕ ಸಂಘರ್ಷಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ದೊರೆಯುತ್ತದೆ ಎಂದು ಶ್ರೀಗಳು ತಿಳಿಸಿದರು.

ವಿಶ್ವದಲ್ಲಿರುವ ವಿವಿಧ ಧರ್ಮಗಳು ತಮ್ಮದೇ ಆದ ಆಚರಣೆ, ಪರಂಪರೆ, ತತ್ವ ಮತ್ತು ಆರಾಧನಾ ವಿಧಾನಗಳನ್ನು ಹೊಂದಿವೆ. ಆದರೆ ಅವುಗಳ ಅಂತಿಮ ಗುರಿ ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದೇ ಆಗಿದೆ. ಒಳಗಿನ ಶಾಂತಿಯನ್ನು ಕಂಡುಕೊಳ್ಳುವಂತೆ ಮಾಡುವುದು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ಆಗಿದೆ ಎಂದು ಶ್ರೀಗಳು ವಿವರಿಸಿದರು.

ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರಾದ ಅಣ್ಣಾಪುರ ಶಿವಕುಮಾರ್‌, ಅನಸೂಯ ಶಿವಕುಮಾರ್‌, ನಂದೀಶ್‌, ಸುಧಾರಾವ್‌, ರೋಹಿಣಿ ಉಡುಪ ಸೇರಿದಂತೆ ಹಲವರು ಭಾಗಿಯಾಗಿದ್ದರು.