ಪತಿ ತೀರಿ ಹೋದ ನಂತರ ಪತ್ನಿಯು ಕುಂಕುಮ, ಬಳೆ, ಹೂವು ಮುಡಿಯದಂತೆ ನಿಷೇಧ ಹೇರುವುದು ಪೈಶಾಚಿಕ ಕೃತ್ಯ ಎಂದು ಸಾಮಾಜಿಕ ಕಾರ್ಯಕರ್ತೆ ಭವಾನಿ ಪುಟ್ಟಪ್ಪ ಅಭಿಪ್ರಾಯಪಟ್ಟರು.

ಸಾಗರ: ಪತಿ ತೀರಿ ಹೋದ ನಂತರ ಪತ್ನಿಯು ಕುಂಕುಮ, ಬಳೆ, ಹೂವು ಮುಡಿಯದಂತೆ ನಿಷೇಧ ಹೇರುವುದು ಪೈಶಾಚಿಕ ಕೃತ್ಯ ಎಂದು ಸಾಮಾಜಿಕ ಕಾರ್ಯಕರ್ತೆ ಭವಾನಿ ಪುಟ್ಟಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಭಾನುವಾರ ಜೋಷಿ ಫೌಂಡೇಶನ್, ನಂ ಸಮಾಚಾರ ಪತ್ರಿಕಾ ಬಳಗ, ಅಭಿನಯ ಸಾಗರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಯ ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಣ್ಣುಮಗು ಹುಟ್ಟಿದಾಗ ಹೆತ್ತವರು ಬಳೆ, ಕುಂಕುಮ, ಹೂವು ಮುಡಿಸಿ ಸಂಭ್ರಮಿಸುತ್ತಾರೆ. ಬಳೆ ಅರಿಶಿನ ಕುಂಕುಮ, ಹೂವು ಹೆಣ್ಣಿನ ಆಸ್ತಿಯಾಗಿರುತ್ತದೆ. ಯಾವುದೋ ಕಾರಣದಿಂದ ಗಂಡ ಸತ್ತಾಗ ಅದನ್ನು ತೆಗೆಸುವುದು, ಅದನ್ನು ಧರಿಸದಂತೆ ನಿಷೇಧ ಹೇರುವುದು ಅಮಾನವೀಯ ಎಂದು ಪ್ರತಿಪಾದಿಸಿದರು.ಹೆಣ್ಣಿನ ಮೇಲ್ಭಾಗದ ಈ ವಸ್ತುಗಳನ್ನು ತೆಗೆಯಬಹುದು. ಆದರೆ ಅಂತರಂಗದಲ್ಲಿ ಅಚ್ಚೊತ್ತಿರುವುದನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ಇಂತಹ ಮೂಢನಂಬಿಕೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಅಭಯ ಬಾಗಿನ ಕಾರ್ಯಕ್ರಮ ಸ್ತುತ್ಯಾರ್ಹವಾದದ್ದು ಎಂದರು.ನಿವೃತ್ತ ಪ್ರಾಧ್ಯಾಪಕ ಸದಾನಂದ ಜೋಯ್ಸ್ ಮಾತನಾಡಿ, ಜನರಲ್ಲಿ ವೈಚಾರಿಕ ಪ್ರಜ್ಞೆ ಜಾಗೃತವಾಗಬೇಕು. ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿದ್ದಾಳೆ. ಅರಿಶಿನ ಕುಂಕುಮ, ಹೂವು, ಬಳೆ ಎಲ್ಲವೂ ಅವಳ ಅಸ್ವಿತ್ವ. ಅದನ್ನು ಕಿತ್ತುಕೊಳ್ಳುವುದು ಎಂದರೆ ಅದು ಸ್ತ್ರೀಕುಲಕ್ಕೆ ಮಾಡಿದ ಅವಮಾನ. ಹೆಣ್ಣಿಗೆ ಯಾವುದೇ ಕೆಲಸ ನೀಡಿದರೂ ಅತ್ಯಂತ ಶಿಸ್ತುಬದ್ಧವಾಗಿ ಮಾಡುತ್ತಾಳೆ. ಹೆಣ್ಣಿನಿಂದ ಯಾವುದೇ ಹಕ್ಕುಗಳನ್ನು ಕಿತ್ತುಕೊಳ್ಳಬಾರದು ಎಂದು ಹೇಳಿದರು.ನಗರಸಭೆ ಮಾಜಿ ಅಧ್ಯಕ್ಷೆ ಎನ್.ಲಲಿತಮ್ಮ, ಜ್ಯೋತಿ ನಂಜುಂಡಸ್ವಾಮಿ ಇನ್ನಿತರರು ಹಾಜರಿದ್ದರು. ಶಾಂತಲಾ ಸ್ವಾಗತಿಸಿದರು. ಮ.ಸ.ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಕ್ಷಿತಾ ವಂದಿಸಿದರು. ಕೌಶಿಕ್ ಕಾನುಗೋಡು ನಿರೂಪಿಸಿದರು.೧೩ಕೆ.ಎಸ್.ಎ.ಜಿ.೨ಸಾಗರ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಭಾನುವಾರ ಅಭಯ ಬಾಗಿನ ಕಾರ್ಯಕ್ರಮ ನಡೆಯಿತು.