ಗದಗ: ಕಡಲೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ನಡೆಸುತ್ತಿರುವ ಅಹೋ ರಾತ್ರಿ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದಲ್ಲದೇ ಬುಧವಾರ ತೀವ್ರ ಸ್ವರೂಪ ಪಡೆದುಕೊಂಡು ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತು ಇಬ್ಬರು ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿತು.
ಎರಡನೇ ದಿನ ರೈತ ಹೋರಾಟಗಾರರು ಜಿಲ್ಲಾಡಳಿತ ಭವನದ ಗೇಟ್‌ಗೆ ಜಾನುವಾರು ಕಟ್ಟಿ, ಮೇವು ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿನ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಗಂಟೆಗಳ ಕಾಲ ನಡೆದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಹೆಚ್ಚಾಗ ತೊಡಗಿತು.
ಹೆದ್ದಾರಿಯಲ್ಲಿ ಹೊರಳಾಡಿ ಪ್ರತಿಭಟನೆ: ಹೆದ್ದಾರಿ ಮಧ್ಯದಲ್ಲಿಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರು ಸರ್ಕಾರದ ನಡೆ ಖಂಡಿಸಿ ಹೆದ್ದಾರಿಯಲ್ಲಿ ಹೊರಳಾಡಿ (ಉರುಳು ಸೇವೆ ರೀತಿ) ಆಕ್ರೋಶ ವ್ಯಕ್ತಪಡಿಸಿ ಶವದ ಮುಂದೆ ಅಳುವಂತೆ ಸರ್ಕಾರವೇ ಸತ್ತು ಹೋಗಿದೆ ಎಂದು ಬೊಬ್ಬೆ ಹಾಕಿ ಅಳುತ್ತಲೇ ಪ್ರತಿಭಟನೆ ಮಾಡಿದರು. ಈ ವೇಳೆ ಹೆದ್ದಾರಿಯಲ್ಲಿ ಹೊರಳಾಡುತ್ತಿದ್ದ ರೈತ ಮಹಿಳೆಯರನ್ನು ಸಮಾಧಾನ ಪಡಿಸಲು ಮಹಿಳಾ ಪೊಲೀಸ್ ಸಿಬ್ಬಂದಿ ಪರದಾಡಿದರು.ಪ್ರತಿಭಟನಾ ಸ್ಥಳದಲ್ಲಿ ರೈತರು ಬಾರುಕೋಲು ಮೂಲಕ ಚಾಟಿ ಬೀಸಿ, ಒನಕೆ ಹಿಡಿದು, ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ಬಂದ್ ಮಾಡಿ, ವಾಹನ ತಡೆದು ಪ್ರತಿಭಟನೆ ನಡೆಸಿದರಲ್ಲದೇ ಕಡಲೆ ಬೆಳೆ ಬಾಕಿ ಹಣ ನೀಡದೇ ಅನ್ನದಾತರನ್ನು ಸತಾಯಿಸುತ್ತಿರುವ ಸರ್ಕಾರದ ವಿರುದ್ಧ ಬಾಯಿ ಬಡಿದುಕೊಂಡು ಆಕ್ರೋಶ ಹೊರಹಾಕಿದರು.
ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಗೂ ಹಿರಿಯ ಅಧಿಕಾರಿಗಳು ಮಹಿಳೆಯರ ಕೈಯಲ್ಲಿನ ವಿಷದ ಬಾಟಲ್ ಕಿತ್ತುಕೊಳ್ಳಲು ಹರಸಾಹಸ ಪಡಬೇಕಾಯಿತು. ತಕ್ಷಣವೇ ಸ್ಥಳದಲ್ಲಿದ್ದ ಆ್ಯಂಬುಲೆನ್ಸ್ ಮೂಲಕ ವಿಷಸೇವನೆ ಮಾಡಿದ್ದ ರೈತ ಮಹಿಳೆಯರಾದ ಸರಸ್ವತಿ ದಾಸರ, ಗೀತಾ ಬಾಲಪ್ಪನವರ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್‌ಆರ್‌ಎಲ್‌ಎಂ) ಗದಗ ಒಕ್ಕೂಟದಡಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಎನ್‌ಆರ್‌ಎಲ್‌ಎಂ ಜಿಪಂ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಮೆಳವಣಿಕಿ ಹಾಗೂ ತಾಲೂಕು ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ದಾವಣಗೆರೆಯ ಮಾರುತಿ ಗೌಡ ಎಂಬುವವರೊಂದಿಗೆ ಮಧ್ಯಸ್ಥಿಕೆ ವಹಿಸಿ ಮೂರು ತಿಂಗಳಲ್ಲಿ ಅಂದಾಜು ₹27 ಕೋಟಿ ಮೌಲ್ಯದ ಕಡಲೆಯನ್ನು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೊಡಿಸಿದ್ದಾರೆ. ಇದರ ಭಾಗವಾಗಿ ₹ 20 ಕೋಟಿ ಆರ್‌ಟಿಜಿಎಸ್ ಮೂಲಕ ಪಾವತಿಸಿದ್ದು, ಬಾಕಿ ಉಳಿದ ₹ 6.50 ಕೋಟಿ ಪಾವತಿಸುತ್ತಿಲ್ಲ. ಜಿಲ್ಲೆಯ ಗದಗ ಮತ್ತು ಮುಂಡರಗಿ ತಾಲೂಕಿನ 450 ರೈತರಿಂದ ಕಡಲೆ ಖರೀದಿಸಿ 12 ತಿಂಗಳಾದರೂ ಬಾಕಿ ಹಣ ಪಾವತಿಸಿಲ್ಲ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಹಣ ಕೊಡಿಸಬೇಕು ಎಂದು ಹಲವಾರು ರೈತರು ಆಗ್ರಹಿಸಿದರು.