ಹಾವೇರಿ: ಕತೆಗಾರನಿಗೆ ವಿಷಯ ಆಯ್ಕೆ ಅತಿ ಮುಖ್ಯ. ಕತೆ ಹೇಳುವ ಸಂದರ್ಭಗಳು ಸೌಂದರ್ಯಪ್ರಜ್ಞೆಯಿಂದ ಕೂಡಿರಬೇಕು. ಜತೆಗೆ ಅಂತರ್ದೃಷ್ಟಿ ಹಾಗೂ ಲೋಕದೃಷ್ಟಿ ಸಂವೇದನೆ ಮೂಲಕ ಸಮಾಧಾನ ಭಾವದಿಂದ ಬರೆದವರು ಮಾತ್ರ ಕತೆಗಾರ ಆಗಿ ಉಳಿಯಬಲ್ಲರು ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅಭಿಪ್ರಾಯಪಟ್ಟರು.
ಭಾಷೆ, ಧರ್ಮ, ಜಾತಿ ಮೀರಿದ ಬರಹಗಾರ ಅದ್ಭುತ ಬರವಣಿಗೆ ಸೃಷ್ಟಿಸಬಲ್ಲ. ಬರಹಗಾರ ಸಮುದಾಯಪ್ರಜ್ಞೆಯ ಭಾವದೊಂದಿಗೆ ಸಾರ್ವತ್ರಿಕ ಸತ್ಯದ ವಿಷಯಕ್ಕೆ ಆದ್ಯತೆ ನೀಡಬೇಕು. ಸಾಹಿತಿಗಳಿಗೆ, ಹೋರಾಟಗಾರರಿಗೆ ಸ್ವಾಭಿಮಾನದ ಕಿಡಿ ಹೊತ್ತಿಸಿದ ಅಗ್ರಶ್ರೇಣಿಯಲ್ಲಿರುವ ಹಾವೇರಿ ಜಿಲ್ಲೆಯ ಸಾಹಿತ್ಯ ಲೋಕ ವಿಭಿನ್ನವಾದದ್ದು. ಈ ಹಿನ್ನೆಲೆಯಲ್ಲಿ ಉದಯೋನ್ಮುಖ ಬರಹಗಾರರು ಇತ್ತ ಲಕ್ಷ್ಯ ಕೊಡುವುದು ಅವಶ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, ಹಾವೇರಿಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಾರ್ಥ ಪ್ರಕಟವಾಗಿರುವ ಬಿಂಬ-ಪ್ರತಿಬಿಂಬಗಳು ಕಥಾ ಸಂಪುಟ ಹಿರಿಯ ಮತ್ತು ಕಿರಿಯ ಬರಹಗಾರರಿಗೆ ಅವಕಾಶ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಜರುಗುವ ಸಾಹಿತ್ಯಿಕ ಚಟುವಟಿಕೆಗೆ ಮಾದರಿಯಾಗಿದೆ. ಈ ಪರಂಪರೆ ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನವಪೀಳಿಗೆ ಮೇಲಿದೆ ಎಂದರು.ಕಥಾ ಸಂಪುಟ ಬಿಂಬ ಭಾಗದ ಕುರಿತು ಮಾತನಾಡಿದ ಲೇಖಕ ಲಿಂಗರಾಜ ಸೊಟ್ಟಪ್ಪನವರ, ಬದುಕಿನ ಚಳುಕು ಮೀರಿದರೆ ಮಾತ್ರ ಕಥೆ ಉಳಿಯುತ್ತದೆ. ಮೌಲಿಕ ಬರಹ ರೂಢಿಗತ ಮಾಡಿಕೊಂಡರೆ ಕಥಾ ಸಾಹಿತ್ಯ ಮುಂಚೂಣಿಯಲ್ಲಿರುತ್ತದೆ. ಬಿಂಬ ಭಾಗದಲ್ಲಿನ ಕಥೆಗಳು ಬದುಕಿನ ವಿವಿಧ ಮಜಲುಗಳನ್ನು ಅನಾವರಣಗೊಳಿಸುತ್ತವೆ ಎಂದರು.
ಕವಯತ್ರಿ ದೀಪಾ ಗೋನಾಳ ಮಾತನಾಡಿ, ಭಾಷೆಯನ್ನು ಬಳಸಿಕೊಳ್ಳುವ ಹಾಗೂ ದುಡಿಸಿಕೊಳ್ಳುವ ವಿಚಾರವನ್ನು ಉತ್ತರ ಕರ್ನಾಟಕ ಭಾಗದವರಿಗೆ ಹೇಳಿಕೊಡಬೇಕಿಲ್ಲ. ಆದರೆ ಕಥಾ ಸಂಪುಟದಲ್ಲಿ ಪ್ರತಿಬಿಂಬಗಳ ರೀತಿಯಲ್ಲಿ ಉದಯೋನ್ಮುಖ ಬರಹಗಾರರು ತಮ್ಮ ಭಾಷಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಕರಣಬದ್ಧವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಕಥಾ ವಿಷಯ ಎಷ್ಟು ಮುಖ್ಯವೋ ಅದನ್ನು ಅಭಿವ್ಯಕ್ತಿಸುವ ಮಾರ್ಗವೂ ಅಷ್ಟೇ ಮುಖ್ಯ ಎಂದರು.