ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಬಂದ್‌

KannadaprabhaNewsNetwork |  
Published : Jan 09, 2025, 12:49 AM IST
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಹು-ಧಾ ಬಂದ್‌ಗೆ ಬೆಂಬಲಿಸಿ ಸಭೆ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಮಹಾನಗರದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ಈ ರಜೆ ಸರಿದೂಗಿಸಲು ಮುಂದಿನ ಎರಡು ಶನಿವಾರಗಳನ್ನು ಪೂರ್ತಿಯಾಗಿ ನಡೆಸಲು ಶಾಲಾ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಆದರೆ, ಪಿಯು, ಪದವಿ ಕಾಲೇಜು, ಸರ್ಕಾರಿ ಇಲಾಖೆಗಳ ಕುರಿತಾಗಿ ಶಿಕ್ಷಣ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ.

ಹುಬ್ಬಳ್ಳಿ:

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳು ಜ. 9ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಕರೆ ನೀಡಿರುವ ಬಂದ್‌ಗೆ ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಕಾಂಗ್ರೆಸ್‌ ಕೂಡ ಕೈ ಜೋಡಿಸಿದೆ.

ಹಾಲು, ಮೆಡಿಕಲ್‌, ಆಸ್ಪತ್ರೆ, ಗ್ಯಾಸ್‌ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ವ್ಯಾಪಾರ-ವಹಿವಾಟು, ಚಿತ್ರಮಂದಿರ ಸ್ಥಗಿತಗೊಳ್ಳಲಿವೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ರಜೆ ಘೋಷಿಸಲಾಗಿದೆ. ಬಸ್‌ ಸಂಚಾರವನ್ನು ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಈ ನಡುವೆ ಬಂದ್‌ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್‌ ಕಮಿಷನರೇಟ್‌ ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಿದೆ.

ಅಂಬೇಡ್ಕರ್‌ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವಮಾನ ಮಾಡಿದ್ದಾರೆ. ಇದು ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತಿದೆ. ಕೂಡಲೇ ಅಮಿತ್‌ ಶಾ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವೇ ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಬೇಕು ಎಂದು ದಲಿತ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ.

ಬಂದ್‌:

ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌, ಅವರ ಸ್ವಾಭಿಮಾನಿ, ಅಭಿಮಾನಿ ಅನುಯಾಯಿಗಳ ಬಳಗ ಈ ಬಂದ್‌ಗೆ ಕರೆ ನೀಡಿದೆ. ಇದಕ್ಕೆ 100ಕ್ಕೂ ಅಧಿಕ ದಲಿತ ಸಂಘಟನೆ, ಆಟೋ ರಿಕ್ಷಾ ಚಾಲಕರ ವ ಮಾಲೀಕರ ಸಂಘ, ರೈತ ಸಂಘಟನೆ, ಕಾರ್ಮಿಕ ಸಂಘಟನೆಗಳು ಬೆಂಬಲಿಸಿವೆ. ಈ ನಡುವೆ ಬಂದ್‌ ಬೆಂಬಲಾರ್ಥವಾಗಿ ಕಾಂಗ್ರೆಸ್‌ ಕೂಡ ಸಭೆ ನಡೆಸಿದೆ. ಬಂದ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಮೂಲಕ ಬಂದ್‌ಗೆ ಕೈ ಪಡೆ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದೆ. ಮಹಾನಗರದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ಈ ರಜೆ ಸರಿದೂಗಿಸಲು ಮುಂದಿನ ಎರಡು ಶನಿವಾರಗಳನ್ನು ಪೂರ್ತಿಯಾಗಿ ನಡೆಸಲು ಶಾಲಾ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಆದರೆ, ಪಿಯು, ಪದವಿ ಕಾಲೇಜು, ಸರ್ಕಾರಿ ಇಲಾಖೆಗಳ ಕುರಿತಾಗಿ ಶಿಕ್ಷಣ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ.

ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಆದರೆ, ಆಗಿನ ಪರಿಸ್ಥಿತಿ ನೋಡಿಕೊಂಡು ಬಸ್‌ ಸಂಚಾರ ಮುಂದುವರಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆ ತಿಳಿಸಿದೆ. ಇನ್ನು ಹಾಲು, ತರಕಾರಿ, ಮೆಡಿಕಲ್‌ ಶಾಪ್‌, ಆಸ್ಪತ್ರೆ, ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ಬಗೆಯ ಸಮಸ್ಯೆ ಮಾಡುವುದಿಲ್ಲ. ಆದರೆ ಇನ್ನುಳಿದ ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡಲಾಗುವುದು. ಸಾರ್ವಜನಿಕರು, ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡುವ ಮೂಲಕ ಬೆಂಬಲಿಸಬೇಕು ಎಂದು ಬಂದ್‌ ಕರೆ ಕೊಟ್ಟವರು ಮನವಿ ಮಾಡಿಕೊಂಡಿದ್ದಾರೆ.ಕಾಂಗ್ರೆಸ್‌ ಸಭೆ:

ಬಂದ್‌ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಚೇರಿಯಲ್ಲಿ ಸಭೆ ನಡೆಸಿದ ಪಕ್ಷದ ಮುಖಂಡರು, ಬಂದ್‌ಗೆ ಸಂಪೂರ್ಣ ಬೆಂಬಲಿಸಲು ನಿರ್ಧರಿಸಿದರು. ಮಹಾನಗರ ಜಿಲ್ಲಾ ಕಾಂಗ್ರೆಸ್‌ ಹಾಗೂ ಮಹಿಳಾ ಕಾಂಗ್ರೆಸ್‌ ಪ್ರತ್ಯೇಕವಾಗಿ ಸಭೆ ನಡೆಸಿ ಬೆಂಬಲ ಸೂಚಿಸಿವೆ.ಬಂದ್‌ ಗೆ ಬೆದರಿಕೆ:

ಈ ನಡುವೆ ಬಂದ್‌ ನಡೆಸದಂತೆ ಬೆದರಿಕೆಯೊಡ್ಡಲಾಗುತ್ತಿದೆ. ಅಂತಹವರ ಮೇಲೆ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದಲ್ಲಿ ಸಮತಾ ಸೇನಾ ಕರ್ನಾಟಕ ಸಂಘಟನೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಬಂದ್‌ ಮಾಡದಂತೆ ಬಿಜೆಪಿ ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕು. ಬಂದ್‌ಗೆ ತಡೆಯೊಡ್ಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಬಂದ್‌ ವೇಳೆ ಏನಾದರೂ ಅನಾಹುತಗಳು ನಡೆದರೆ ಅದಕ್ಕೆ ಬಿಜೆಪಿಯೇ ಕಾರಣ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಗುರುನಾಥ ಉಳ್ಳಿಕಾಶಿ, ಮಾರುತಿ ದೊಡ್ಡಮನಿ ಸೇರಿದಂತೆ ಹಲವು ಮನವಿ ಸಲ್ಲಿಸಿದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ