ಕನ್ನಡಪ್ರಭ ವಾರ್ತೆ ರಾಯಚೂರು
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ನ್ಯಾಯಯುತ ಪರಿಹಾರ ಕಲ್ಪಿಸಬೇಕು. ಭೂ ಸ್ವಾಧೀನದಿಂದ ಉಂಟಾಗಿರುವ ಹಲವಾರು ಸಮಸ್ಯೆಗಳನ್ನು ಇತ್ಯರ್ಥ ಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಎಐಡಿವೈಒ ಬುಧವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೇರಿದ ರೈತರು ನ್ಯಾಯಕ್ಕಾಗಿ ಘೋಷಣೆ ಕೂಗಿ ಬೇಡಿಕೆ ಈಡೇರಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಭಾರತ ಮಾಲಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಬೆಳಗಾವಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ 748ಎ ಗಾಗಿ ರೈತರಿಂದ ಭೂಮಿ ಸ್ವಾಧೀನ ಪಡೆಸಿಕೊಳ್ಳಲು ಮುಂದಾಗಿರುವ ಸರ್ಕಾರ ಕನಿಷ್ಠ ಕಾನೂನು ನಿಯಮಗಳನ್ನು ಪಾಲಿಸುತ್ತಿಲ್ಲ. ಜಮೀನಿಗೆ ಅತ್ಯಂತ ಕನಿಷ್ಠ ಬೆಲೆ ನಿಗದಿ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಯಚೂರು ಜಿಲ್ಲೆಯಲ್ಲಿ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹಿನ್ನೆಲೆ ರೈತರ ಭೂಮಿ ಸ್ವಾಧೀನ ಪ್ರಕ್ರಿಯೆ ಹಾಗೂ ನ್ಯಾಯಯುತ ಬೆಲೆ ನಿಗದಿಪಡಿಸುವ ಹಿನ್ನೆಲೆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡುವ ಮೂಲಕ ಭೂ ಸಂತ್ರಸ್ತರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ತೆರೆಬಾವಿ ಬುದ್ಧಿನ್ನಿಯಿಂದ ಅಮರಾವತಿವರೆಗಿನ ಗ್ರಾಮಗಳ ಜಮೀನು ಈಗ ನಂದವಾಡಿಗೆ ಏತ ನೀರಾವರಿ ಹಾಗೂ ಪಾಮನಕಲ್ಲೂರು, ಅಮೀನಗಡ, ವಟಗಲ್ 5ಎ ನೀರಾವರಿ ಯೋಜನೆಗೊಳಪಡುತ್ತಿರುವ ಹಿನ್ನೆಲೆ ಅದನ್ನು ಪರಿಗಣಿಸಿ ಜಮೀನಿಗೆ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.ರಾಷ್ಟ್ರೀಯ ಹೆದ್ದಾರಿ- ಜಮೀನು ಸ್ವಾಧೀನ ಪ್ರಕ್ರಿಯೆ ಅವೈಜ್ಞಾನಿಕವಾಗಿ ನಡೆಸಲಾಗಿದೆ. ಜಮೀನು ಕಳೆದುಕೊಂಡ ರೈತರಿಗೆ ನ್ಯಾಯಯುತ ಬೆಲೆ ನಿಗದಿ ಮಾಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ನಿಯಮಗಳನ್ನೆ ಉಲ್ಲಂಘಿಸುತ್ತಿದ್ದಾರೆ. ಭೂ ಸಂತ್ರಸ್ತರ ರೈತರ ಆಕ್ಷೇಪಣೆಗಳಿಗೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಭೂ ಸ್ವಾಧೀನ ಮಾಡಿಕೊಳ್ಳ ಬೇಕಾದರೆ ಇರುವಂತಹ ಎಲ್ಲ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಏಕಾಏಕಿಯಾಗಿ ಜಮೀನಿಗೆ ಅತ್ಯಂತ ಕಡಿಮೆ ಬೆಲೆ ನಿಗದಿ ಮಾಡಿ, ಕೆಲವರಿಗೆ ಅವಾರ್ಡ್ ನೀಡುತ್ತಿರುವುದು ಖಂಡನೀಯ ಎಂದು ದೂರಿದರು.ಜನಸಾಮಾನ್ಯರಿಗೆ ಅವಶ್ಯಕತೆ ಇಲ್ಲದ ಈ ಹೆದ್ದಾರಿ ನಿರ್ಮಾಣ ಹಿಂಪಡೆಯಬೇಕು. ಒಂದು ವೇಳೆ ಹೆದ್ದಾರಿ ನಿರ್ಮಾಣದ ಅವಶ್ಯತೆ ಇದ್ದರೆ, ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪರ್ಯಾಯ ಜಮೀನು ನೀಡಬೇಕು ಎಂದು ಒತ್ತಾಯಿಸಿದರು.
ಪರ್ಯಾಯ ಜಮೀನು ನೀಡದೇ ಇದ್ದ ಪಕ್ಷದಲ್ಲಿ ಪ್ರಸಕ್ತ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಸೂಕ್ತ ಪರಿಹಾರ ನೀಡಬೇಕು, ಜಂಟಿ ಸರ್ವೆ ಮಾಡಿ ಜಮೀನಿನಲ್ಲಿರುವ ಭಾವಿ, ಬೋರವೆಲ್, ಮರ ಒಡ್ಡು ಇತ್ಯಾದಿಗಳನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರಿಹಾರ ಒದಗಿಸಿ: ಪ್ರಸಕ್ತ ಜಮೀನಿನ ನಿರ್ದಿಷ್ಟ ಮಾಲೀಕತ್ವ ಇರುವವರಿಗೆ ಆವಾರ್ಡ್ ಮಾಡಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಮೀನು ಕಳೆದುಕೊಳ್ಳುತ್ತಿರುವ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟೆಯಲ್ಲಿ ಎಐಡಿವೈಒ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ, ರೈತ ಮುಖಂಡರಾದ ಮಲ್ಲನಗೌಡ ಹಳ್ಳಿ, ಸಿದ್ದಲಿಂಗಪ್ಪ ಸಾಹುಕಾರ, ಮಲ್ಲನಗೌಡ ಹಳ್ಳಿ, ಪಂಪಾಪತಿ ಹೊಸಗೌಡ್ರ, ಅಮರೇಶ ಸಂತೆ ಕೆಲ್ಲೂರು, ಶಿವರಾಜ ಎಂ. ಬಾಲರಾಜ ನಾಯಕ ಸೇರಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಇದ್ದರು.