7 ತಾಸು 3 ಫೇಸ್‌ ವಿದ್ಯುತ್‌ಗೆ ಆಗ್ರಹಿಸಿ ರಾಯಚೂರಿನಲ್ಲಿ ರೈತರ ಪ್ರತಿಭಟನೆ

KannadaprabhaNewsNetwork |  
Published : Oct 20, 2023, 01:01 AM IST
19ಕೆಪಿಆರ್‌ಸಿಆರ್‌01 | Kannada Prabha

ಸಾರಾಂಶ

ರಾಜ್ಯ ಸರ್ಕಾರದಿಂದ ವಿದ್ಯುತ್ ಸರಬರಾಜಿನಲ್ಲಿ ತಾರತಮ್ಯಕ್ಕೆ ಖಂಡನೀಯ, ರೈತ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೋರಾಟ, ಜೆಸ್ಕಾಂ ಅಧಿಕಾರಿಗೆ ಮನವಿ

ರಾಯಚೂರು: ವಿದ್ಯುತ್‌ ತಾರತಮ್ಯ ವಿರೋಧಿಸಿ, ಕೃಷಿ ಪಂಪ್‌ ಸೆಟ್‌ಗಳಿಗೆ 7 ತಾಸು 3 ಫೇಸ್‌ ವಿದ್ಯುತ್‌ ಸರಬರಾಜು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ಜೆಸ್ಕಾಂ ಕಚೇರಿ ಆವರಣದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ರೈತರು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜೆಸ್ಕಾಂ ಅಧಿಕಾರಿ ಚಂದ್ರಶೇಖರ ದೇಸಾಯಿಗೆ ಮನವಿ ಸಲ್ಲಿಸಿದರು. ರಾಜ್ಯದ 190ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಸುಮಾರು 45 ಲಕ್ಷಕ್ಕು ಅಧಿಕ ರೈತರು ಪಂಪ್‌ಸೆಟ್‌ಗಳ ಆಧಾರದ ಮೇಲೆಯೇ ಕೃಷಿ ಮಾಡುತ್ತಿದ್ದಾರೆ. ಮಳೆ ಅಭಾವ, ಬರ ಸನ್ನಿವೇಶದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದು, ಇಷ್ಟೆಲ್ಲ ಸಂಕಷ್ಟವನ್ನು ಅನ್ನದಾತರು ಎದುರಿಸುತ್ತಿದ್ದರು ಸಹ ರಾಜ್ಯ ಸರ್ಕಾರ ವಿದ್ಯುತ್ ಸರಬರಾಜಿನಲ್ಲಿ ತಾರತಮ್ಯ ತೋರುತ್ತಿರುವುದು ಖಂಡನೀಯ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬರಗಾಲ, ಮಳೆ ಅಭಾವ ಹಿನ್ನೆಲೆಯಲ್ಲಿ ರೈತರ ತಮ್ಮ ಜಮೀನುಗಳಲ್ಲಿ ಹಾಕಿರುವ ಬೆಳೆಗಳು ನಾಶವಾಗುತ್ತಿದ್ದು ಇಂತಹ ದುಸ್ಥರ ಸಮಯದಲ್ಲಿ ರಾಜ್ಯ ಸರ್ಕಾರ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಮುಂಜಾಗೃತಾ ಕ್ರಮಗಳನ್ನು ವಹಿಸದೇ ಬರಘೋಷಣೆ ಮಾಡಿದ್ದು, ಇದರಿಂದಾಗಿ ಜನಸಾಮಾನ್ಯರು ಅದರಲ್ಲಿಯೂ ರೈತಾಪಿ ವರ್ಗದವರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ವಿದ್ಯುತ್‌ಉತ್ಪಾದನೆ, ಬೇಡಿಕೆ ಹಾಗೂ ಹೊರ ರಾಜ್ಯಗಳಿಂದ ಖರೀದಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್‌ ಮುಂದಾಲೋಚನೆ ಇಲ್ಲದ ಕಾರಣಕ್ಕೆ ರಾಜ್ಯದಲ್ಲಿ ಕರೆಂಟ್‌ ಕ್ಷಾಮ ಉಂಟಾಗಿದೆ ಎಂದು ಆರೋಪಿಸಿದರು. ರೈತರ ಪಂಪ್‌ಸೆಟ್‌ಗಳಿಗೆ 7 ತಾಸು 3 ಫೇಸ್‌ ಕರೆಂಟ್ ನೀಡಬೇಕು, ರೈತರ ಬೆಳೆ ರಕ್ಷಣೆಗೆ ಸಹಕರಿಸಬೇಕು, ಮುಂದಿನ ದಿನಗಳಲ್ಲಿ ಕರೆಂಟ್‌ ಕ್ಷಾಮ ಎದುರಾಗದಂತೆ ಎಚ್ಚರವಹಿಸಬೇಕು, ಅನಾಗತ್ಯವಾಗಿ ಪೋಲಾಗುತ್ತಿರುವ ಕರೆಂಟನ್ನು ಉಳಿಸಲು ಕ್ರಮವಹಿಸಬೇಕು, ಸೌರ್ಯ ಶಕ್ತಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಎಲ್ಲ ಕಬ್ಬಿನ ಕರ್ಖಾನೆಗಳಲ್ಲಿ ವಿದ್ಯುತ್‌ ಉತ್ಪಾದನಾ ಘಟನಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು. ಅಗತ್ಯವಿರುವ ಕಡೆ ವಿದ್ಯುತ್‌ ಉಪಕೇಂದ್ರ ಆರಂಭಿಸಲು ತುರ್ತು ಕ್ರಮವಹಿಸಬೇಕು, ಸುಟ್ಟು ಹೋಗಿರುವ ವಿದ್ಯುತ್‌ ಪರಿವರ್ತಕಗಳನ್ನು ಶೀಘ್ರವಾಗಿ ರಿಪೇರಿ ಮಾಡಬೇಕು ಇಲ್ಲವೇ ಹೊಸ ಟಿಸಿಗಳನ್ನು ಬದಲಾಯಿಸಬೇಕು, ವಿದ್ಯುತ್‌ ಉತ್ಪಾದನಾ ಘಟಕಗಳಿಗಾಗಿ ಭೂಮಿ ಕಳೆದುಕೊಂಡ ರಾಯಚೂರು ತಾಲೂಕಿಗೆ 12 ತಾಸು 3 ಫೇಸ್‌ ಕರೆಂಟ್ ನೀಡಬೇಕು ಮತ್ತು ಇಲ್ಲಿ ತನಕ ಸರ್ಕಾರದಿಂದ ಎಷ್ಟು ವಿದ್ಯುತ್‌ ಖರೀದಿ ಮಾಡಲಾಗಿದೆ ಎನ್ನುವ ಮಾಹಿತಿ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು. ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್‌, ಉಪಾಧ್ಯಕ್ಷ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್‌ ಇಂಗಳದಾಳ, ಮುಖಂಡರಾದ ಬೂದಯ್ಯ ಸ್ವಾಮಿ ಗಬ್ಬೂರು, ಬಸವರಾಜ ಮಲ್ಲಿನಮಡಗು, ದೇವರಾಜ ನಾಯಕ, ಬ್ರಹ್ಮಯ್ಯ ಆಚಾರಿ, ಮಲ್ಲಣ್ಣ ಗೌಡೂರು, ಹಾಜಿ ಮಸ್ತಾನ್, ಎಚ್‌.ಶಂಕ್ರಪ್ಪ, ಸಿದ್ದಯ್ಯ ಸ್ವಾಮಿ,ರವಿಕುಮಾರ ಗಬ್ಬೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ