ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಆಲೂರಿನಲ್ಲಿ ಪ್ರತಿಭಟನೆ

KannadaprabhaNewsNetwork | Published : Oct 31, 2023 1:15 AM

ಸಾರಾಂಶ

ಸಂಕಷ್ಟಕ್ಕೆ ಸಿಲುಕಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಆಲೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಆಲೂರು ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದಾಗಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದೆ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರಬತ್ತೂರು ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಸೋಮವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪಿಎಲ್‌ಡಿಬಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಬಲತ್ಕಾರದ ಸಾಲ ವಸೂಲಾತಿ ನಿಲ್ಲಬೇಕು. ಬರದಿಂದಾಗಿ ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದರೂ ಸಹ ಕೆಲ ರಾಷ್ಟ್ರೀಕೃತ ಬ್ಯಾಂಕ್‌ನವರು ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ರೈತರ ಮನೆಗಳಿಗೆ ಹೋಗಿ ವಸುಲಾತಿ ನೆಪದಲ್ಲಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಸಾಲ ವಸೂಲಿ ಮಾಡಬಾರದೆಂದು ಆದೇಶ ನೀಡಿದ್ದು ಅಗತ್ಯವಿದ್ದರೆ ಮರು ನವೀಕರಣ ಮಾಡಿಕೊಳ್ಳಬೇಕೆಂದು ಸೂಚಿಸಿದ್ದರೂ ಸಹ ಬ್ಯಾಂಕಿನವರು ಬಡ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿರುವ ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅವರನ್ನು ಜೈಲಿಗಟ್ಟಬೇಕೆಂದು ಒತ್ತಾಯಿಸಿದರು. ವಿದ್ಯುತ್‌ ನೀಡಿ: ಬರದ ಸಂಕಷ್ಟದಲ್ಲಿರುವ ರೈತರ ಬೆಳೆ ಉಳಿಸಲು ಪ್ರತಿದಿನ ಕನಿಷ್ಠ 10 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ನೀಡಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಹಾಗೂ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಜೀವನ ದುಸ್ತರ: ತಾಲೂಕಿನ ಕೆಂಚಮ್ಮನ ಹೊಸಕೋಟೆ ಕುಂದೂರು ಹಾಗೂ ಪಾಳ್ಯ ಹೋಬಳಿಗಳಲ್ಲಿ ಕಳೆದ ಹಲವು ದಶಕಗಳಿಂದ ಕಾಡಾನೆ ಹಾಗೂ ಮಾನವನ ನಡುವೆ ಸಂಘರ್ಷ ನಡೆಯುತ್ತಿದ್ದು ಇದರಿಂದ ರೈತರು ಜೀವನ ನಡೆಸುವುದೇ ದುಸ್ತರವಾಗಿದೆ. ಕಾಡಾನೆ ಹಾವಳಿಗೆ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಭಾಗದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದ ಅವರು, ಕಳೆದ 45 ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದಿರುವ ಜಮೀನನ್ನು ಎಚ್‌ಆರ್‌ಪಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟಿರುವ ಸರ್ಕಾರದ ಕ್ರಮ ಸರಿ ಇಲ್ಲ. ಶೀಘ್ರವೇ ಹಕ್ಕುಪತ್ರಗಳನ್ನು ನೀಡಬೇಕು. ಮುಂದಿನ 10 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ಗಾಯದ ಮೇಲೆ ಬರೆ: ತಾಲೂಕು ಅಧ್ಯಕ್ಷ ಎಚ್ ಡಿ ಧರ್ಮರಾಜ್ ಮಾತನಾಡಿ, ತಾಲೂಕಿನಾದ್ಯಂತ ರೈತರು ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದರೂ ಸಹ ಇವರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ವಿಚಾರವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ವಿನಾಕಾರಣ ರೈತರಿಗೆ ತೊಂದರೆ ಕೊಡುತ್ತಿರುವುದನ್ನು ಶೀಘ್ರ ತಪ್ಪಿಸಬೇಕು. ತಾಲೂಕು ಕಚೇರಿಗಳಲ್ಲಿ ರೈತರ ದಾಖಲಾತಿಗಳನ್ನು ಸಮರ್ಪಕವಾಗಿ ತಿದ್ದುಪಡಿ ಮತ್ತು ಸರ್ವೆ ಇಲಾಖೆಯಲ್ಲಿ ಅಸಮರ್ಪಕ ಅಳತೆ ಮಾಡಿ ರೈತರನ್ನು ಕಂಗೆಡಿಸುತ್ತಿರುವುದನ್ನು ತಪ್ಪಿಸಬೇಕು. ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರು ಸರ್ಕಾರಗಳು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ನ್ಯಾಯತವಾಗಿ ಪರಿಹಾರ ಸಿಗುತ್ತಿಲ್ಲ. ರೈತರು ಸಂಘಟಿತ ಹೋರಾಟ ನಡೆಸುವ ಮೂಲಕ ನ್ಯಾಯ ಪಡೆದುಕೊಳ್ಳಬೇಕಾಗಿದೆ. ಆದುದರಿಂದ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಈ ಒಕ್ಕೂಟದ ಮೂಲಕ ಹೋರಾಟ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ್, ಹಾಸನ ತಾಲೂಕು ಅಧ್ಯಕ್ಷ ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಜಯಣ್ಣ, ತೀರ್ಥ, ಕಾರ್ಯದರ್ಶಿಗಳಾದ ದಿನೇಶ್, ಶಶಿ, ಉಪಾಧ್ಯಕ್ಷ ಕೃಷ್ಣಮೂರ್ತಿ, ರೈತ ಮಹಿಳೆ ಲತಾ ಯೋಗೇಶ್, ಕಾಂತರಾಜು, ಭರಣ, ಮುಂತಾದವರು ಉಪಸ್ಥಿತರಿದ್ದರು. *ಹೇಳಿಕೆ: ಬ್ಯಾಂಕ್ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಸರ್ಕಾರದ ಆದೇಶವಿದ್ದರೂ ಸಹ ರೈತರಿಗೆ ಕಿರುಕುಳ ನೀಡುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಾಲೂಕು ಕಚೇರಿಯಲ್ಲಿ ರೈತರು ದಾಖಲಾತಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು. - ಕುರುಬತ್ತೂರು ಶಾಂತಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ * ಬಾಕ್ಸ್‌ನ್ಯೂಸ್‌: ನ್ಯಾಯ ಎಲ್ಲರಿಗೂ ಒಂದೇ ಇರಲಿ ವನ್ಯಜೀವಿಗಳ ಅಂಗಾಂಗಗಳನ್ನು ಧರಿಸುವುದು ಅಥವಾ ತಮ್ಮಲ್ಲಿ ಇಟ್ಟುಕೊಳ್ಳುವುದು ಕಾನೂನು ರೀತಿಯ ಅಪರಾಧ. ಆದರೆ ದೊಡ್ಡವರಿಗೊಂದು ನ್ಯಾಯ ಬಡ ರೈತರಿಗೊಂದು ನ್ಯಾಯ ಎಂಬುದನ್ನು ನಾವು ಒಪ್ಪುವುದಿಲ್ಲ ಎಂದು ರೈತ ಸಂಘಟನೆಗಳ ಒಕ್ಕೂಟದ ಕುರಬತ್ತೂರು ಶಾಂತಕುಮಾರ್ ತಿಳಿಸಿದರು. ರೈತ ವರ್ತೂರ್ ಸಂತೋಷ್ ಹುಲಿಯುಗುರಿನ ಸರ ಧರಿಸಿದ್ದಾರೆ ಎಂಬ ಕಾರಣದಿಂದ ಅವರನ್ನು ಸೂಕ್ತ ವಿಚಾರಣೆ ಮಾಡದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರನ್ನು ಅರಣ್ಯ ಇಲಾಖೆಯವರು ಬಂಧಿಸಿರುವ ಕ್ರಮವನ್ನು ನಾವು ಖಂಡಿಸುತ್ತೇವೆ. ತಿಳಿಯದೆ ಈ ರೀತಿ ಮಾಡಿರುವ ರೈತರಿಗೆ ತೊಂದರೆ ನೀಡುವ ಈ ಅಧಿಕಾರಿಗಳು ತಮ್ಮ ಮನೆಗಳಿಗೆ ಎಷ್ಟು ಅರಣ್ಯದ ಮರಗಳನ್ನು ಹಾಕಿದ್ದಾರೆ, ಮನೆಗಳಲ್ಲಿ ಯಾವ ಯಾವ ಪ್ರಾಣಿಯ ಅಂಗಾಂಗಗಳನ್ನು ಅಲಂಕಾರಕ್ಕೆ ಇರಿಸಿದ್ದಾರೆ ಎಂಬ ಬಗ್ಗೆ ಸೂಕ್ತ ತನಿಖೆ ಮಾಡಿದರೆ ಹಲವಾರು ಅಧಿಕಾರಿಗಳ ಬಣ್ಣ ಬಯಲಾಗುತ್ತದೆ. ಇಂತಹ ಅಧಿಕಾರಿಗಳನ್ನು ಮೊದಲು ಬಂಧಿಸಬೇಕು. ಇವರಿಗೊಂದು ನ್ಯಾಯ ತಿಳಿಯದೆ ತಪ್ಪು ಮಾಡಿದ ರೈತರಿಗೊಂದು ನ್ಯಾಯವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Share this article