ಜನರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಸಿದ್ಧ: ದರ್ಶನಾಪೂರ್

KannadaprabhaNewsNetwork | Published : Oct 31, 2023 1:15 AM

ಸಾರಾಂಶ

ಸುರಪುರದಲ್ಲಿ ಜನತಾ ದರ್ಶನ | ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದನೆ

ಕನ್ನಡಪ್ರಭ ವಾರ್ತೆ ಸುರಪುರಜನಪ್ರತಿನಿಧಿಗಳು ಹಾಗೂ ಸರ್ಕಾರ ಜನರ ಹತ್ತಿರ ಹೋದಾಗ ಮಾತ್ರ, ಸಾರ್ವಜನಿಕರ ಬಾಯಲ್ಲಿ ಇರಲು ಸಾಧ್ಯ. ಆದ್ದರಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ್ ಹೇಳಿದರು.

ನಗರದ ರಂಗಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾರ್ವಜನಿಕರಿಂದ ಕುಂದು-ಕೊರತೆ ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಅಧಿಕಾರಿಗಳ ಜತೆ ಎರಡು ಬಾರಿ ಸುದೀರ್ಘವಾಗಿ ಚರ್ಚಿಸಿದ ನಂತರವೇ ಸರ್ಕಾರಿ ಇಲಾಖೆಗಳಲ್ಲಿರುವ ಸಮಸ್ಯೆ ಗುರುತಿಸಿ ಅವುಗಳನ್ನು ಪರಿಹರಿಸಲು ಜನತಾ ದರ್ಶನ ಹಮ್ಮಿಕೊಂಡಿದೆ ಎಂದರು.

ಯಾದಗಿರಿ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಜನತಾ ದರ್ಶನದಲ್ಲಿ ಸುಮಾರು 294 ಅರ್ಜಿಗಳಲ್ಲಿ 189 ಅರ್ಜಿಗಳು ವಿಲೇವಾರಿಯಾಗಿದೆ. 18 ಅರ್ಜಿಗಳಿಗೆ ವಿಳಾಸವೇ ಇಲ್ಲವಾಗಿದೆ. ಆದ್ದರಿಂದ ಅರ್ಜಿ ಪಡೆಯುವಾಗ ವಿಳಾಸ ಬರೆದುಕೊಂಡು ಕಾಲಮಿತಿಯಲ್ಲಿ ಅರ್ಜಿ ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ದರ್ಶನಾಪುರ ಹೇಳಿದರು.

ಬರಪೀಡಿತ : ಯಾದಗಿರಿ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಕ್ಷಣ ನೋಂದಣಿ ಮಾಡಿಸಿಕೊಳ್ಳಬೇಕು. ಪರಿಹಾರಕ್ಕಾಗಿ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ, ಕಂದಾಯ ಇಲಾಖೆಯ ಕೇಂದ್ರಗಳಿಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳ ಬೇಕೆಂದರು.

ಜಿಲ್ಲೆಯಲ್ಲಿ 2.32 ಲಕ್ಷ ರೈತರಿದ್ದು, ನೋಂದಣಿ ಮಾಡಿಕೊಳ್ಳದ ಸುಮಾರು 80 ಸಾವಿರ ರೈತರು ಕೂಡಲೇ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್, ಜಾತಿ ಪ್ರಮಾಣ ಪತ್ರ ಹಾಗೂ ಎರಡು ಭಾವಚಿತ್ರದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸುರಪುರ ತಾಲೂಕಿಗೆ ಸಂಬಂಧಪಟ್ಟಂತೆ ಸೋಮವಾರ ಮಧ್ಯಾಹ್ನದವರೆಗೆ 170 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ ಸ್ಥಳದಲ್ಲಿಯೇ 70 ಅರ್ಜಿಗಳಿಗೆ ಸಚಿವರು ಸ್ಪಂದಿಸಿ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯ ಸರ್ಕಾರ ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಕಾಳಜಿಯಿಂದಾಗಿ ಜನರಿಗೆ ನೇರವಾಗಿ ವಿವಿಧ ಸೌಲಭ್ಯಗಳು ತಲುಪಿಸಬೇಕು ಎಂಬ ಉದ್ದೇಶದಿಂದ ಜನರ ಮನೆ ಬಾಗಿಲಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೋಗಿ ಅವರ ಸಮಸ್ಯೆ ನಿವಾರಣೆಗೆ ಜನತಾ ದರ್ಶನ ಕಾರ್ಯಕ್ರಮವನ್ನು ಪ್ರತಿ ತಾಲೂಕಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಸರ್ಕಾರದಿಂದ ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸಲು ಜನತಾ ದರ್ಶನದಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರ ಕುಂದುಕೊರತೆಗಳನ್ನು ಶೀಘ್ರ ಪರಿಹರಿಸಲಾಗುವುದು. ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಕಚೇರಿ ಆವರಣದಲ್ಲಿ ಜನರು ಕುಳಿತಿರುತ್ತಾರೆ. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಜನತಾ ದರ್ಶನ ಸೂಕ್ತವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಉತ್ತಮ ಕಾರ್ಯನಿರ್ವಹಿಸಲಾಗುವುದು ಎಂದರು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಜಿಲ್ಲಾ ಪಂಚಾಯಿತಿ ಸಿಇಒ ಗರೀಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಡಿವೈಎಸ್ಪಿ ಬಸವೇಶ್ವರ ಹೀರಾ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಸುರಪುರ ತಹಸೀಲ್ದಾರ್ ಕೆ. ವಿಜಯಕುಮಾರ ಸೇರಿ ಇತರರಿದ್ದರು.

Share this article