ನವೆಂಬರ್‌ 18ರಂದು ತಂಬಾಕು ಮಾರುಕಟ್ಟೆ ಬಂದ್‌ ಮಾಡಿ ರೈತರ ಪ್ರತಿಭಟನೆ

KannadaprabhaNewsNetwork |  
Published : Nov 13, 2024, 12:48 AM IST
12ಎಚ್ಎಸ್ಎನ್3 :  | Kannada Prabha

ಸಾರಾಂಶ

ಗುಣಮಟ್ಟದ ತಂಬಾಕಿಗೆ ಉತ್ತಮ ದರ ದೊರೆಯುತ್ತಿಲ್ಲ ಹಾಗೂ ಕೆಳ ದರ್ಜೆಯ ತಂಬಾಕು ಖರೀದಿ ನಡೆಸುತ್ತಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನ.18 ರಂದು ತಂಬಾಕು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡಸುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ.ಯೋಗಣ್ಣ ಎಚ್ಚರಿಸಿದರು. ಅರಕಲಗೂಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಹೇಳಿಕೆ । ರೈತ ಸಂಘದ ಅಧ್ಯಕ್ಷ ಎಸ್.ವಿ.ಯೋಗಣ್ಣ ಮಾಹಿತಿ । ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ ಆರೋಪ । ದೊರೆಯದ ಉತ್ತಮ ದರ

ಕನ್ನಡಪ್ರಭ ವಾರ್ತೆ ಅರಕಲಗೂಡು

ತಂಬಾಕು ಮಾರುಕಟ್ಟೆ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಗುಣಮಟ್ಟದ ತಂಬಾಕಿಗೆ ಉತ್ತಮ ದರ ದೊರೆಯುತ್ತಿಲ್ಲ ಹಾಗೂ ಕೆಳ ದರ್ಜೆಯ ತಂಬಾಕು ಖರೀದಿ ನಡೆಸುತ್ತಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನ.18 ರಂದು ತಂಬಾಕು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡಸುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ.ಯೋಗಣ್ಣ ಎಚ್ಚರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಉತ್ತಮ ದರ್ಜೆ ಹೊಗೆಸೊಪ್ಪಿಗೆ ಆಂದ್ರಪ್ರದೇಶದಲ್ಲಿ ಕೆ.ಜಿ.ಗೆ 400 ರು. ದರ ನೀಡುತ್ತಿದ್ದರೆ ಇಲ್ಲಿ 280 ರು. ನೀಡಲಾಗುತ್ತಿದೆ, ಈ ವಾರ ದರ 260ರು ಗೆ ಕುಸಿದಿದೆ. ಮಾರುಕಟ್ಟೆ ಪ್ರಾರಂಭವಾಗಿ ತಿಂಗಳು ಕಳೆದರೂ ಕೆಳದರ್ಜೆಯ (ಎನ್ಒಜಿ) ಹಾಗೂ ಕಪ್ಪು ಹೊಗೆಸೊಪ್ಪು (ಬಿಪಿಎಲ್) ಖರೀದಿ ನಡೆಯುತ್ತಿಲ್ಲ. ರಾಜ್ಯದ 50 ಸಾವಿರ ತಂಬಾಕು ಬೆಳೆಗಾರರು ಕಳೆದ 40 ವರ್ಷದಿಂದ 100 ಮಿಲಿಯನ್ ಗುಣಮಟ್ಟದ ತಂಬಾಕನ್ನು ಬೆಳೆಯುತ್ತಿದ್ದಾರೆ. ವಿದೇಶಗಳಿಗೆ ರಪ್ತಾಗುತ್ತಿರುವ ಇದರಿಂದ ಕೇಂದ್ರ ಸರ್ಕಾರಕ್ಕೆ 45 ಸಾವಿರ ಕೋಟಿ ರು.ನಷ್ಟು ವಿದೇಶಿ ವಿನಿಮಯ ದೊರೆಯತ್ತಿದೆ. ಆದರೆ ಬೆಳೆಗಾರರು ಬೀದಿಗೆ ಬೀಳುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ತಂಬಾಕು ಬೆಳೆಗಾರರಿಗೆ ಜಿಎಸ್‌ಟಿ ಮತ್ತು ಎಸ್‌ಟಿಎಸ್‌ಸಿ ತೆರಿಗೆ ಹೊರೆ ಹೇರಲಾಗುತ್ತಿದೆ. ಕ್ಷೇಮಾಭಿವೃದ್ಧಿ ನಿಧಿಗೆ ಬೆಳೆಗಾರರ ವಂತಿಗೆ ನೀಡುತ್ತಿದ್ದರೂ ಬೆಳೆಗಾರ ಮೃತಪಟ್ಟಾಗ ಕೇವಲ 50 ಸಾವಿರ ರು. ಹಣ ಮಾತ್ರ ನೀಡಲಾಗುತ್ತಿದೆ, ರೈತರ ಬ್ಯಾರನ್ ಮನೆಗಳು ಸುಟ್ಟು ಹೋದರೆ 2 ಲಕ್ಷ ರು. ನಷ್ಟ ಉಂಟಾಗುತ್ತದೆ, ಆದರೆ ನೀಡುವ ಪರಿಹಾರ ಕೇವಲ 30 ಸಾವಿರ ರು. ಮಾತ್ರ. ರಾಜ್ಯದಲ್ಲಿ ಸುಮಾರು 25 ಸಾವಿರ ಅನಧಿಕೃತ ಬೆಳೆಗಾರರು ಇದ್ದು ಇವರಿಗೂ ಅಧಿಕೃತ ಬೆಳೆಗಾರರಂತೆ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ರೈತರ ಸಮಸ್ಯೆಗಳ ಕುರಿತು ಸಂಸದ ಶ್ರೇಯಸ್ ಪಟೇಲ್ ಗಮನ ಹರಿಸಿ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಗಮನ ಸೆಳೆಯಬೇಕು, ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಬೇಕು. ಸೂಕ್ತ ಬೆಲೆ,ಮಾರಾಟ ವ್ಯವಸ್ಥೆ ಹಾಗೂ ಬೆಳೆಗಾರರ ಹಿತರಕ್ಷಣೆಗಾಗಿ ರೈತ ಸಂಘ ನ.18 ರಂದು ಮಾರುಕಟ್ಟೆ ಬಂದ್ ಮಾಡಿಸಿ ಪ್ರತಿಭಟನೆ ನಡೆಸಲಿದೆ. ಸಂಸದರು ಸ್ಥಳಕ್ಕೆ ಬಂದು ರೈತರ ಸಮಸ್ಯೆ ಅಲಿಸಿ ಆಹವಾಲು ಸ್ವೀಕರಿಸುವಂತೆ ಆಗ್ರಹಿಸಿದರು.

ವಕ್ಫ್‌ ಹೆಸರು: ಕ್ರಮಕ್ಕೆ ಆಗ್ರಹ:

ಪಟ್ಟಣದ ಸರ್ವೆ ನಂಬರ್ 120ರಲ್ಲಿ 4.10 ಎಕರೆ ಸರ್ಕಾರಿ ಜಾಗವನ್ನು ಪಹಣಿಯಲ್ಲಿ ವಕ್ಫ್ ಹೆಸರಿಗೆ ನಮೂದಿಸಿರುವ ಕ್ರಮವನ್ನು ರೈತ ಸಂಘ ಖಂಡಿಸುತ್ತದೆ. ಕಂದಾಯ ಇಲಾಖೆ ಕೂಡಲೇ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ನ.15 ಶುಕ್ರವಾರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಬಂದ್ ಮಾಡಿ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಗೌರವಾಧ್ಯಕ್ಷ ಭುವನೇಶ್, ಜಿಲ್ಲಾ ಸಂಘದ ಉಪಾಧ್ಯಕ್ಷ ಎಚ್.ಸಿ.ಜಗಧೀಶ್, ಮುಖಂಡರಾದ ಮುಗಳೂರು ಕೃಷ್ಣೇಗೌಡ, ಮಂಜೇಗೌಡ, ವೇದಾನಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ