ನವೆಂಬರ್‌ 26ಕ್ಕೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ: ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ

KannadaprabhaNewsNetwork |  
Published : Nov 23, 2024, 12:35 AM IST
22ಸಿಎಚ್‌ಎನ್‌51ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ.26 ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಹೇಳಿದರು. ಚಾಮರಾನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿ । ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾಹಿತಿ । ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ.26 ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.12ರಂದು ಕುದೇರು ಚಾಮುಲ್‌ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಚಾಮುಲ್‌ ಹಾಲಿನ ದರವನ್ನು ಹೆಚ್ಚಳ ಮಾಡಿದ್ದರೂ ರೈತರಿಗೆ ನೀಡುವ ದರವನ್ನು ಹೆಚ್ಚಳ ಮಾಡಿಲ್ಲ. ಆಡಳಿತಾತ್ಮಕ ವೆಚ್ಚವನ್ನು ತೋರಿಸಿ ನಷ್ಟವನ್ನು ಹೇಳಿದೆ. ರೈತರಿಗೆ ನೀಡುವ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಚಾಮುಲ್‌ ಹೊರ ರಾಜ್ಯಗಳಲ್ಲೂ ಮಾರುಕಟ್ಟೆಯನ್ನು ವಿಸ್ತರಿಸಿ ಒಂದು ಕೆಜಿ ಬೆಣ್ಣೆಯನ್ನು 150 ರು.ಗೆ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಒಂದು ಕೆಜಿ ಬೆಣ್ಣೆಯನ್ನು 450 ರು.ಗೆ ನೀಡುತ್ತಿದೆ. ಚಾಮುಲ್‌ ಆಡಳಿತ ಖಾಸಗಿ ದರ್ಬಾರ್‌ ನಡೆಸುತ್ತಿರುವಂತೆ ಕಾಣುತ್ತಿದೆ. ರಾಜ್ಯದಲ್ಲಿ 300 ರು.ಗೆ ಬೆಣ್ಣೆಯನ್ನು ನೀಡಲು ರಾಜ್ಯದಲ್ಲಿ ಹೆಚ್ಚಿನ ಜನರು ಬೆಣ್ಣೆಯನ್ನು ಖರೀದಿಸುತ್ತಾರೆ. ಚಾಮುಲ್‌ ವಹಿವಾಟು ಹೆಚ್ಚಳವಾಗುತ್ತದೆ ಎಂದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿ, ನಾವು ಅಧಿಕಾರಕ್ಕೆ ಬಂದ ಕೂಡಲೇ ಹಿಂಪಡೆಯಲಾಗುವುದು ಎಂದು ಹೇಳಿದ್ದರು. ಆದರೆ, ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ರಾಜ್ಯ ಸರ್ಕಾರ ಹಿಂಪಡೆಯದೇ ರೈತ ವಿರೋಧಿಯಾಗಿದೆ ಎಂದು ದೂರಿದರು.

ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ.26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಾಜಿಪುರ ಕುಮಾರ್, ಉಪಾಧ್ಯಕ್ಷ ಪಾಳ್ಯ ಶಿವಮೂರ್ತಿ, ತಾಲೂಕು ಅಧ್ಯಕ್ಷ ಹೆಗ್ಗವಾಡಿ ಮಹದೇವಸ್ವಾಮಿ, ತಾಲೂಕು ಉಪಾಧ್ಯಕ್ಷ ಮೂರ್ತಿ, ಶಿವಪ್ರಸಾದ್ ಇದ್ದರು.

PREV