ಶಿಗ್ಗಾಂವಿ: ಡಿಎಪಿ ಗೊಬ್ಬರದ ಅಭಾವದಿಂದ ರೈತರಿಗೆ ತೊಂದರೆಯಾಗಿದ್ದು, ಕೂಡಲೇ ಸಮರ್ಪಕವಾಗಿ ಡಿಎಪಿ ಗೊಬ್ಬರ ಪೂರೈಸುವಂತೆ ಆಗ್ರಹಿಸಿ ನೂರಾರು ರೈತರು ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ತಾಲೂಕಿನ ರಸಗೊಬ್ಬರ ಮಾರಾಟಗಾರರು ಡಿಎಪಿ ಗೊಬ್ಬರವನ್ನು ಹೆಚ್ಚಿನ ಬೆಲೆ ನೀಡಿ ಹೊರ ತಾಲೂಕಿನ ರೈತರಿಗೆ ಮಾರುತ್ತಿದ್ದು, ತಾಲೂಕಿನ ರೈತರಿಗೆ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಇನ್ನು ಕೆಲ ವ್ಯಾಪಾರಸ್ಥರು ಬೇರೆ ಬೇರೆ ಮಳಿಗೆಯಲ್ಲಿ ಡಿಎಪಿ ಗೊಬ್ಬರವನ್ನು ಸಂಗ್ರಹಿಸಿಟ್ಟಿದ್ದಾರೆ. ಡಿಎಪಿ ಕೇಳಿದರೆ ಉಪಯುಕ್ತವಲ್ಲದ ಇತರೆ ಗೊಬ್ಬರಗಳನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಅಧಿಕ ಬೆಲೆಗೆ ಮಾರುತ್ತಿರುವ ಮತ್ತು ಕೃತಕ ಅಭಾವ ಸೃಷ್ಟಿಸುತ್ತಿರುವ ವ್ಯಾಪಾರಸ್ಥರ ವಿರುದ್ಧ ತಹಸೀಲ್ದಾರರು ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಕಠಿಣ ಕ್ರಮ ಜರುಗಿಸಬೇಕು. ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಕಡ್ಡಾಯವಾಗಿ ದರಪಟ್ಟಿ ಮತ್ತು ಪ್ರತಿ ದಿನದ ಸ್ಟಾಕ್ ಪಟ್ಟಿಯನ್ನು ಹಾಕುವಂತೆ ಆಗ್ರಹಿಸಿದರು.ತಹಸೀಲ್ದಾರ್ ರವಿಕುಮಾರ ಕೊರವರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಗೆಜ್ಜಲಿ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜತೆ ಮಾತನಾಡಿ, ರೈತರ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.ಪ್ರತಿಭಟನೆಯಲ್ಲಿ ಮುಖಂಡರಾದ ಶಿವಾನಂದ ಮ್ಯಾಗೇರಿ, ಆನಂದ ಕೆಳಗಿನಮನಿ, ಶಂಕರಗೌಡ ಪಾಟೀಲ, ಮುತ್ತಣ್ಣ ಗುಡಗೇರಿ, ಬಸವರಾಜ ಗೊಬ್ಬಿ, ಪಂಚಯ್ಯ ಹಿರೇಮಠ, ಮಂಜುನಾಥ ಹಾವೇರಿ, ಈರಣ್ಣ ಸಮಗೊಂಡ, ರವಿ ಪಾಟೀಲ, ಮಾಲತೇಶ ಬಾರಕೇರ, ನಿಂಗನಗೌಡ ರಾಯನಗೌಡ್ರ, ಮಂಜುನಾಥ ಕಂಕನವಾಡ, ದೇವರಾಜ ದೊಡ್ಡಮನಿ, ಚಂದ್ರಣ್ಣ ಕರೆಕನ್ನಮ್ಮನವರ, ಶಿವಾನಂದ ಜಡಿಮಠ ಇತರರಿದ್ದರು.