ಕೆರೆ ತುಂಬಿಸುವಂತೆ ಆಗ್ರಹಿಸಿ ಸೆ. 8ರಂದು ರೈತರ ಹೋರಾಟ

KannadaprabhaNewsNetwork |  
Published : Sep 07, 2026, 03:00 AM IST
ಹನುಮಸಾಗರದ ಪಟ್ಟಣದ ಗ್ರಾಮ ದೇವತೆ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಭೆ ನಡೆಯಿತು. | Kannada Prabha

ಸಾರಾಂಶ

ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಿ ಹನುಮಸಾಗರ ಕೆರೆಗೆ ನೀರು ಹರಿಸಬೇಕು ಹಾಗೂ ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಸೆ. 8ರಂದು ಹೋರಾಟ ನಡೆಸಲು ರೈತರು ನಿರ್ಧರಿಸಿದ್ದಾರೆ.

ಹನುಮಸಾಗರ: ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಿ ಹನುಮಸಾಗರ ಕೆರೆಗೆ ನೀರು ಹರಿಸಬೇಕು ಹಾಗೂ ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಸೆ. 8ರಂದು ಹೋರಾಟ ನಡೆಸಲು ರೈತರು ನಿರ್ಧರಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ಗ್ರಾಮದೇವತೆ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದರೈತರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು.

ರೈತ ಮುಖಂಡ ಶಿವಪುತ್ರಪ್ಪ ಕೋಳೂರು ಮಾತನಾಡಿ, ಹನುಮಸಾಗರ ಡ್ಯಾಂಗೆ ನೀರು ಹರಿಸುವಂತೆ ಮೂರು ವರ್ಷಗಳಿಂದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದೇವೆ. ಕೆಲವು ಸಂದರ್ಭಗಳಲ್ಲಿ ಅಲ್ಪ ಪ್ರಮಾಣದ ನೀರು ಹರಿಸಲಾಗಿದೆ. ಆದರೆ ಇದರಿಂದ ಹನುಮಸಾಗರ ಕೆರೆ ಸಂಪೂರ್ಣವಾಗಿ ತುಂಬಲು ಸಾಧ್ಯವಾಗಿಲ್ಲ. ಸುತ್ತಮುತ್ತಲಿನ ಗ್ರಾಮಗಳ ಕೆರೆಗಳಿಗೆ ನೀರು ಹರಿಯುತ್ತಿದ್ದು, ಕೆಲವು ಕಡೆ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ನೀರು ಲಭ್ಯವಾಗಿದೆ. ಆದರೆ ಹನುಮಸಾಗರ ಕೆರೆಗೆ ಮಾತ್ರ ಸಮರ್ಪಕವಾಗಿ ನೀರು ಹರಿಯದಿರುವುದು ಆತಂಕಕಾರಿ ಸಂಗತಿ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹನುಮಸಾಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದರು.

ರೈತ ಮುಖಂಡ ದಾಮೋದರ ಹಯಗ್ರೀವ ಮಾತನಾಡಿ, ಈಗಾಗಲೇ ಮಳೆಯಾಗದೆ ರೈತರ ಜೀವನ ಕಷ್ಟಕರವಾಗಿದೆ. ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಸುತ್ತಮುತ್ತಲಿನ ಗ್ರಾಮಗಳ ರೈತರು ಹೋರಾಟ ನಡೆಸಿ ತಮ್ಮ ಕೆರೆಗಳಿಗೆ ನೀರು ಹರಿಸಿಕೊಂಡಿದ್ದಾರೆ. ಆದರೆ ಹನುಮಸಾಗರ ಕೆರೆ ಮಾತ್ರ ಇನ್ನೂ ತುಂಬಿಲ್ಲ. ಎಲ್ಲ ರೈತರು ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾದರೆ ಮಾತ್ರ ಅಧಿಕಾರಿಗಳು ಹಾಗೂ ಸರ್ಕಾರದ ಗಮನ ಸೆಳೆದು ಕೆರೆ ತುಂಬಿಸುವ ಕೆಲಸವನ್ನು ಮಾಡಿಸಲು ಸಾಧ್ಯವಾಗುತ್ತದೆ ಎಂದರು.

ಹಸಿರು ಸೇನೆ ಹುಬ್ಬಳ್ಳಿ ಅಧ್ಯಕ್ಷ ಯಮನೂರ ಮಡಿವಾಳರ ಮಾತನಾಡಿ, ಬರಪೀಡಿತ ತಾಲೂಕು ಪಟ್ಟಿಯಲ್ಲಿ ಕುಷ್ಟಗಿ ಇಲ್ಲ. ಯಾವ ಮಾನದಂಡದ ಆಧಾರದ ಮೇಲೆ ಬರ ಘೋಷಣೆ ಮಾಡಲಾಗಿದೆ ಎಂಬುದು ರೈತರಿಗೆ ಅರ್ಥವಾಗುತ್ತಿಲ್ಲ. ರೈತರು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಸರ್ಕಾರದ ಮೇಲೆ ಒತ್ತಡ ತಂದು ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಸಬಹುದು ಎಂದರು.

ಹನುಮಸಾಗರ ಕೆರೆ ತುಂಬಿಸುವ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ, ಊರಿನ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ವಿವಿಧ ಸಂಘಟನೆಗಳು ಕೈಜೋಡಿಸಿದರೆ ಮಾತ್ರ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆದು ಕೆರೆಗೆ ನೀರು ಹರಿಸಲು ಸಾಧ್ಯವಾಗುತ್ತದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ಕೆರೆ ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಹನುಮಸಾಗರ ಕೆರೆಗೆ ಸಮರ್ಪಕವಾಗಿ ನೀರು ಹರಿಸುವ ಮೂಲಕ ರೈತರ ಕೃಷಿ ಚಟುವಟಿಕೆಗೆ ಹಾಗೂ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಯಮನೂರ ಮಡಿವಾಳರ, ಶಿವಪುತ್ರಪ್ಪ ಕೋಳೂರು, ದಾಮೋದರ ಹಯಗ್ರೀವ, ಉಮೇಶ ಬಾಚಲಾಪುರ, ಪರಸಪ್ಪ ಕೊಂಡಕೇರ, ಇಸ್ಮಾಯಿಲಸಾಬ ತಹಶೀಲ್ದಾರ, ಶಿವಕಾಂತಪ್ಪ ಹಾದಿಮನಿ, ಚಂದಾಲಿಂಗಪ್ಪ ಕಟಗಿ, ಶರಣಪ್ಪ ಪಲ್ಲದ, ಶರಣಪ್ಪ ಹಡಪದ, ಅಹಮದ್, ಹನುಮಂತಪ್ಪ ಹಲಕೂಲಿ, ಶರಣಪ್ಪ ದೊಡಿಹಾಳ, ಮಲ್ಲಪ್ಪ ಪಟ್ಟಣಶೆಟ್ಟಿ, ಶರಣಪ್ಪ ಕಿಲ್ಲೇದ, ದ್ಯಾಮಣ್ಣ ಗುರಿಕಾರ, ಹನುಮಂತಪ್ಪ ಬಿಂಗಿ, ಪಲ್ಲಪ್ಪ ಪಟ್ಟಣಶೆಟ್ಟಿ, ಇರಗಪ್ಪ ಪಟ್ಟಣಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಕೃಷ್ಣ ಮಿಷನ್: ಸ್ವಚ್ಛ ಮಂಗಳೂರು ಅಭಿಯಾನ - ಮಾಸಿಕ ಸ್ವಚ್ಛತಾ ಶ್ರಮದಾನ
ಕದ್ರಿ ಕೃಷ್ಣ ವೇಷ ಸ್ಪರ್ಧೆ: ರಾಷ್ಟ್ರೀಯ ಮಕ್ಕಳ ಉತ್ಸವ ಫಲಿತಾಂಶ