ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬಿಗೆ ನ್ಯಾಯಯುತ ದರ ಘೋಷಣೆ ಮಾಡುವಂತೆ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ 9 ದಿನಗಳಿಂದ ನಡೆದಿದ್ದ ರೈತರ ಹೋರಾಟ ಶನಿವಾರ ಅಂತ್ಯವಾಯಿತು. ಹೋರಾಟಕ್ಕೆ ವೇದಿಕೆಯಾಗಿದ್ದ ಗುರ್ಲಾಪುರದಲ್ಲೇ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಪ್ರತಿಟನ್ ಕಬ್ಬಿಗೆ ₹3300 ದರ ನಿಗದಿ ಮಾಡಿರುವ ಸರ್ಕಾರದ ಆದೇಶ ಪ್ರತಿಯನ್ನು ನೀಡಿ, ಹೋರಾಟಗಾರರ ಎದುರಲ್ಲೇ ದರ ಘೋಷಣೆ ಮಾಡಿದರು. ಬಳಿಕ ರೈತರು ತಮ್ಮ ಹೋರಾಟವನ್ನು ಕೈಬಿಟ್ಟರು. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು. ಗುರ್ಲಾಪುರ ರೈತರ ಹೋರಾಟ ಜನಾಂದೋಲನ ಸ್ವರೂಪ ಪಡೆದಿತ್ತು. ಲಕ್ಷಾಂತರ ರೈತರು ಹೋರಾಟದಲ್ಲಿ ಪಾಲ್ಗೊಂಡು, ಸರ್ಕಾರಕ್ಕೆ ಚಳಿ ಬಿಡಿಸಿದ್ದರು.ಈ ವೇಳೆ ರೈತರನ್ನುದ್ದೇಶಿಸಿ ಮಾತನಾಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ, ರೈತ ಮುಖಂಡ ನಂಜುಂಡಸ್ವಾಮಿ ಸ್ಥಾನವನ್ನು ಕುರುಬೂರು ಶಾಂತಕುಮಾರ ಅವರು ತುಂಬಿದ್ದಾರೆ. 10 ದಿನದಲ್ಲಿ ನನಗೆ ಅಂಜಿಸಿ ಓಡಿಸಿದ್ದಿರಿ. ಅವರು ಜೀವನದಲ್ಲಿ ಹೋರಾಟದಲ್ಲೆ ಇದ್ದವರು. ಅಂತವರು ಗುರ್ಲಾಪೂರಕ್ಕೆ ಬಂದಿದ್ದಾರೆ. ಅವರು ಇದೆ ಹೋರಾಟಕ್ಕೆ ದೆಹಲಿಗೆ ಹೋಗುವಾಗ ಅಪಘಾತವಾಗಿತ್ತು. ಅವರು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಿಮ್ಮಲ್ಲಿ ಬಂದಿದ್ಧಾರೆ ಎಂದರು.ಗುರ್ಲಾಪುರದಲ್ಲಿ ರೈತರ ಹೋರಾಟದ ವೇದಿಕೆ ಮೇಲೆ ವಿಜಯೇಂದ್ರ ಬರ್ತ್ ಡೇ ಮಾಡಿಕೊಂಡು ಹೋದರೆ, ನಾನು ಡೆತ್ ಡೇ ಮಾಡಿಕೊಂಡು ಹೋದೆ. ರೈತರ ವೇದಿಕೆಯಲ್ಲಿ ಬರ್ತ್ ಡೇ ಮಾಡಿಕೊಂಡು ಹೋದ ಅವರ ಹಣೆ ಬರಹ ಹಂಗಿದೆ. ನಮ್ಮ ಹಣೆ ಬರಹ ಹೀಗಿದೆ. ನಾನು ರೈತರ ವೇದಿಕೆಗೆ ಹೋಗದೆ ಬೆಂಗಳೂರಿಗೆ ಹೋಗಲ್ಲ ಎಂದು ಪಟ್ಟು ಹಿಡಿದು ರೈತರ ಸಮಸ್ಯೆ ಆಲಿಸಿದ್ದೇನೆ ಎಂದ ಅವರು, ಒಂದು ಕಾಲದಲ್ಲಿ 35 ಕೋಟಿ ಜನ ಇದ್ದೇವು. ಆಗ ಎರಡು ಹೊತ್ತಿನ ಅನ್ನ ಹಾಕಲು ಆಗುತ್ತಿರಲಿಲ್ಲ. ಸದ್ಯ 140 ಕೋಟಿ ಜನಸಂಖ್ಯೆಯಿದೆ. ಈಗ ದೇಶದ ಎಲ್ಲ ಜನತೆಗೆ ಅನ್ನ ಹಾಕುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ ಎಂದರು.ಗುರ್ಲಾಪುರದ ರೈತರ ಹೋರಾಟ ಆಂದೋಲನ ಸ್ವರೂಪ ಪಡೆದು ಇಡೀ ರಾಜ್ಯಾದ್ಯಂತ ವ್ಯಾಪಿಸಿತು. ಈ ಹೋರಾಟ ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶದ ವ್ಯಾಪ್ತಿಗೂ ಹರಡುತ್ತದೆ ಎಂಬ ಅರ್ಥ ಆಯಿತು. ರೈತ ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು ಎಂದರು.ಇದು ದೊಡ್ಡ ಹೋರಾಟ:
ರೈತ ಮುಖಂಡರಾದ ಚೂನಪ್ಪ ಪೂಜಾರಿ ಮತ್ತು ಶಶಿಕಾಂತ ಗುರೂಜಿ ಅವರನ್ನು ಹಾಡಿಹೊಗಳಿದ ಸಚಿವ ಪಾಟೀಲ, ನನ್ನ ರಾಜಕೀಯ ಜೀವನದಲ್ಲಿ ಇದೇ ದೊಡ್ಡ ಹೋರಾಟ. ನೀವು ಅತ್ತಂಗ ಮಾಡಬೇಕು, ನಾವು ಕುಡಿಸಿದಂತೆ ಇರಬೇಕು. ಬಲೂನ್‌ನಲ್ಲಿ ಹವಾ ತುಂಬಿ ಒಡೆಯಬೇಡಿ. ಬಾಟಲಿ ಒಗೆದರೂ ನಡೆಯುತ್ತದೆ. ಆದರೆ, ನನ್ನನ್ನು ಜೀವಂತ ಬಿಟ್ಟಿದ್ದೀರಿ. ಇದೇ ದೊಡ್ಡ ಪುಣ್ಯ ಎಂದು ಮಾರ್ಮಿಕವಾಗಿ ನುಡಿದರು.ತೂಕದಲ್ಲಿ ಡಿಜಿಟಲೀಕರಣದಲ್ಲೂ ವ್ಯತ್ಯಾಸ ಕಂಡು ಬರುತ್ತಿದೆ ಎಂದು ರೈತರು ಗಮನಕ್ಕೆ ತಂದಿದ್ದಾರೆ. ಒಂದೊಂದು ಕಾರ್ಖಾನೆಯ ಮೇಲೆ ಜಿಲ್ಲಾಡಳಿತ ಒಂದು ಕಣ್ಣಿಟ್ಟಿರುತ್ತದೆ. ನಾನು ರೈತರ ಬಗ್ಗೆ ಅಷ್ಟೇ ಮಾತನಾಡಿದರೆ ಕಾರ್ಖಾನೆ ಮಾಲೀಕರು ಸಿಟ್ಟಿಗೆ ಬರುತ್ತಾರೆ. ಸಕ್ಕರೆ ಕಾರ್ಖಾನೆಯ ಮಾಲೀಕರ ಉಪ ಉತ್ಪನ್ನಗಳ ಬೆಲೆ ಕಡಿಮೆ ಇದೆ. ಇಥೆನಾಲ್ ಅನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ ಎಂದರು.ಮೊದಲನೇ ಸ್ಥಾನದಲ್ಲಿ ಗುಜರಾತ್‌ಗೆ ಕೊಟ್ಟಿದ್ದಾರೆ. ಕರ್ನಾಟಕಕ್ಕೆ 5ನೇ ಸ್ಥಾನ ಕೊಟ್ಟಿದ್ದಾರೆ. ಮಾಧ್ಯಮದವರು ನನ್ನನ್ನೇ ಹಿಡಿಯುತ್ತಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯದಲ್ಲಿ ಅಡ್ಡಾಡುತ್ತಿದ್ದಾರೆ. ಅವರನ್ನು ಯಾರು ಪ್ರಶ್ನೆ ಕೇಳಲ್ಲ. ಅವರು ತಪ್ಪು ಮಾಡುತ್ತಾರೆ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಎಂದಿದ್ದಾರೆ. ಕೇಂದ್ರಕ್ಕೆ ಬರೆದಿರುವ ಪತ್ರ ನನ್ನ ಬಳಿ ಇದೆ. ಇಥೆನಾಲ್‌ಗೆ, ಸಕ್ಕರೆಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ ಎಂದ ಅವರು, ಮೆಕ್ಕೆ ಜೋಳಕ್ಕೆ ಕಳೆದ ವರ್ಷ ₹2400 ದರ ಇತ್ತು. ಈಗ ₹1600ಕ್ಕೆ ಬಂದಿದೆ. ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿಲ್ಲ. ನಾನು ನಿರಾಣಿ ಅವರ ಕಡೆಯಿಂದಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತನಾಡಿಸಿದ್ದೇನೆ. ಎಂಎಸ್‌ಪಿ ಸಕ್ಕರೆ ಧಾರಣೆಗೆ ಬೆಲೆ ನಿಗದಿ ಮಾಡಿ ಎಂದು ಜೋಶಿ ಅವರಿಗೆ ಒಂದು ಪತ್ರ ಬರೆದಿದ್ದಾರೆ. ಎಫ್‌ಆರ್‌ಪಿಯನ್ನು ಕೇಂದ್ರ ನಿಗದಿ ಮಾಡುತ್ತದೆ. ಕೇಂದ್ರ ಒಂದೇ ಒಂದು ಪೈಸಾ ನೀಡಿಲ್ಲ. ನಾವು ಹಣ ಕೊಡುತ್ತೇವೆ. ಆದಾಯ ಅವರಿಗೂ ಹೋಗುತ್ತದೆ. ಹಾಗಾಗಿ, ಪ್ರಹ್ಲಾದ ಜೋಶಿ ಅವರನ್ನು ಪ್ರಶ್ನೆ ಮಾಡುವಂತೆ ರೈತ ಮುಖಂಡ ಚೂನಪ್ಪ ಪೂಜಾರಿ ಅವರಿಗೆ ಹೇಳಿದ ಸಚಿವರು, ನಾವು ಅಷ್ಟೇ ಹೊಣೆಗಾರರಲ್ಲ. ಕೇಂದ್ರದ ಹೊಣೆಗಾರಿಕೆಯೂ ಇದೆ ಎಂದರು.ಕಬ್ಬು ಬೆಳೆಗಾರರಿಗೆ ನಮ್ಮ ಸರ್ಕಾರ ಹೆಚ್ಚುವರಿ ಹಣ ನೀಡಿದೆ. ಕೇಂದ್ರದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಅಸಮತೋಲನ ಹೋಗಲಾಡಿಸಲು ಕೇಂದ್ರದ ಜೊತೆ ಚರ್ಚೆ ಮಾಡಲಾಗುವುದು. ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರು ಹೋರಾಟ ಮುಂದುವರಿಸಿದ್ದಾರೆ. ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದರು.ಸರ್ಕಾರ ನಿಗದಿ ಮಾಡಿದ ಬೆಲೆ ಕೊಡಲೇಬೇಕು: ಚೂನಪ್ಪನಮ್ಮ ಹೋರಾಟಕ್ಕೆ ಪೊಲೀಸರು ಬಹಳ ಸಾಥ್ ನೀಡಿದ್ದಾರೆ. ಎಫ್‌ಆರ್‌ಪಿ ನಮಗೆ ಸಂಬಂಧವಿಲ್ಲ. ಸಕ್ಕರೆ ಕಾರ್ಖಾನೆಯವರು ನಮಗೆ ಸರ್ಕಾರ ನಿಗದಿ ಮಾಡಿದ ಬೆಲೆ ಕೊಡಲೇಬೇಕು ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಆಗ್ರಹಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಕ್ಕರೆ ಕಾರ್ಖಾನೆ ಬಂದ್ ಮಾಡಲಾಗಿತ್ತು. ಆಗ ಸರ್ಕಾರ ಎಚ್ಚೆತ್ತುಕೊಂಡಿತು. ರೈತರು ನಮ್ಮನ್ನು ಬೆಂಬಲಿಸಿದರು. ರೈತರ ಬೆಂಬಲದಿಂದ ನಮಗೆ ಜನಾಂದೋಲನ ಹೋರಾಟ ಆರಂಭ ಆಯಿತು. ರಾಜ್ಯ ಹೆದ್ದಾರಿಗೆ ಪ್ರತಿಭಟನೆ ಕರೆ ಕೊಟ್ಟಾಗ ಸರ್ಕಾರ ಎಚ್ಚೆತ್ತುಕೊಂಡಿತು. ಜತೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲರು ತಾವು ಕೊಟ್ಟ ಮಾತಿನಂತೆ ನಡೆದುಕೊಂಡು ರೈತರ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.ನಮ್ಮ ಹೋರಾಟಕ್ಕೆ ಲಕ್ಷಾಂತರ ಜನರು ರೈತರು ಬಂದರು. ನಮ್ಮ ಹೋರಾಟ ಜನಾಂದೋಲನ ಸ್ವರೂಪ ಪಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂದು ಪಕ್ಷಾತೀತವಾಗಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದರು. ಸಕ್ಕರೆ ಮಾಲೀಕರು ಸರ್ಕಾರದ ಮಾತು ಕೇಳುವವರಲ್ಲ. ಸರ್ಕಾರದ ಪ್ರತಿನಿಧಿಯಾಗಿ ಸಚಿವರಾದ ಎಚ್.ಕೆ.ಪಾಟೀಲ, ಶಿವಾನಂದ ಪಾಟೀಲ ಬಂದು ರೈತರ ಸಮಸ್ಯೆ ಆಲಿಸಿದರು. ಸಚಿವ ಶಿವಾನಂದ ಪಾಟೀಲ ಅವರು ತಾವು ನುಡಿದಂತೆ ರೈತರ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.ಶಾಂತಿಯುತವಾಗಿ ರೈತರ ಹೋರಾಟ
ಗುರ್ಲಾಪುರದಲ್ಲಿ ನಡೆದ ರೈತರ ಹೋರಾಟ ಶಾಂತಿಯುತವಾಗಿ ನಡೆದಿದ್ದಕ್ಕಾಗಿ ರೈತರಿಗೆ ಧನ್ಯವಾದ ಹೇಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು, ರೈತ ಮುಖಂಡ ಚೂನಪ್ಪ ಪೂಜಾರಿಗೆ ಗುರ್ಲಾಪುರ ಹುಲಿ ಹಾಗೂ ಶಶಿಕಾಂತ ಗುರೂಜಿಗೆ ಗುರ್ಲಾಪುರ ಗುರು ಎಂದು ನಾಮಪಕರಣ ಮಾಡಿದರು.ಹೋರಾಟದಲ್ಲಿ ನೀವೆಲ್ಲರೂ ತುಂಬ ಮುಖ್ಯವಾದ ಪಾತ್ರ ವಹಿಸಿದ್ದಿರಿ. ಎಲ್ಲದಕ್ಕಿಂತ ಖುಷಿಯಾಗಿದ್ದು ನಮ್ಮ ರೈತರು ಗುರ್ಲಾಪುರದಲ್ಲಿ ಕುಳಿತಿದ್ದು. ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಕ್ಕೆ ಜಿಲ್ಲಾಡಳಿತದಿಂದ ನಿಮಗೆ ಹ್ಯಾಟ್ಸ್ ಅಪ್. ಎಷ್ಟೋ ಕಿಡಿಗೇಡಿಗಳು ನಿಮ್ಮ ವೇದಿಕೆ ಹಿಂಭಾಗದಲ್ಲಿ ಕಿರಿಕರಿ ಮಾಡುವ ಪ್ರಯತ್ನ ಮಾಡಿದರು. ಅದಕ್ಕೆ ಸತ್ಯವಾಗಿ ಹಸಿರು ಶಾಲು ಹಾಕಿಕೊಂಡವರು ಯಾರೂ ಅವಕಾಶ ಕೊಡಲಿಲ್ಲ. ಸಣ್ಣ ಇನ್ಸಿಡೆಂಟ್ ಹತ್ತರಗಿಯಲ್ಲಿ ಆಯಿತು. ಅವರು ಯಾರೂ ನಿಜವಾದ ರೈತರಲ್ಲ ಎಂದರು.ಅಲ್ಲಿರುವ ರೈತರು ಅವರು ನಮ್ಮವರಲ್ಲ ಕಿಡಿಗೇಡಿಗಳ ಹಾಗೆ ಕಾಣುತ್ತಾರೆ. ಆಗ ಚೂನಪ್ಪ ಪೂಜಾರಿ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಅಲ್ಲಿರುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಒಗ್ಗಟ್ಟಿನಲ್ಲಿ ಬಲವಿದೆ ದೇಶಕ್ಕೆ ಸ್ವಾತಂತ್ರ್ಯ ತಂದ ಗಾಂಧೀಜಿ ಮಾದರಿಯಲ್ಲಿ ನೀವು ಹೋರಾಟ ಮಾಡಿದ್ದಿರಿ. ನಿಮ್ಮ ಜೊತೆ ನಾವು ಎಂದಿಗೂ ಇರುತ್ತೇವೆ ಎಂದು ಎಸ್ಪಿ ಗುಳೇದ ಹೇಳಿದರು.ಈ ಸಂದರ್ಭದಲ್ಲಿ ಕೃಷಿ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ, ಮುಗಳಖೋಡ ಮಠದ ಮುರಘರಾಜೇಂದ್ರ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.